
ನವದೆಹಲಿ: ಕೋವಿಡ್ ಪ್ರಕರಣಗಳು ವರದಿಯಾಗುತ್ತಿರುವ ಕಾರಣ, ಹಬ್ಬದ ಋತುಗಳ ಹಿನ್ನೆಲೆಯಲ್ಲಿ ಜನಸಂದಣಿ ತಪ್ಪಿಸಬೇಕು, ಒಳಾಂಗಣದ ಕಾರ್ಯಕ್ರಮಗಳು ಹಾಗೂ ಜನನಿಬಿಡ ಸ್ಥಳಗಳಲ್ಲಿ ಮಾಸ್ಕ್ ಧರಿಸಬೇಕು, ಸಾರ್ವಜನಿಕ ಸಭೆ, ಸಮಾರಂಭ ನಡೆಯುವ ಸ್ಥಳಗಳಲ್ಲಿ ಸಾಕಷ್ಟು ಗಾಳಿಯಾಡುವಂತಿರಬೇಕು ಎಂಬುದನ್ನು ಖಚಿತಪಡಿಸಿಕೊಳ್ಳುವಂತೆ ಕೇಂದ್ರ ಸರ್ಕಾರವು ಶುಕ್ರವಾರ ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಿದೆ.
ಈ ಸಂಬಂಧ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಪತ್ರ ಬರೆದಿರುವ ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಅವರು, ಜಿಲ್ಲಾವಾರು ಇನ್ಫ್ಲುಯೆಂಜಾ ರೀತಿಯ ಅನಾರೋಗ್ಯ ಮತ್ತು ತೀವ್ರತರ ಉಸಿರಾಟದ ಪ್ರಕರಣಗಳ ನಿಯಮಿತ ಮೇಲ್ವಿಚಾರಣೆ ನಡೆಸಿ, ವರದಿ ಸಲ್ಲಿಸುವಂತೆ ಸೂಚಿಸಿದ್ದಾರೆ.
ಈ ಪ್ರಕರಣಗಳನ್ನು ಕೋವಿಡ್–19 ಪರೀಕ್ಷೆಗೆ ಸಹ ಪರಿಗಣಿಸಬಹುದು ಎಂದೂ ಭೂಷಣ್ ಹೇಳಿದ್ದಾರೆ.
ಮುಂಬರುವ ಹಬ್ಬಗಳು ಮತ್ತು ಹೊಸ ವರ್ಷದ ಆಚರಣೆಗಳನ್ನು ಪರಿಗಣಿಸಿ, ಪರೀಕ್ಷೆ, ಪತ್ತೆ, ಚಿಕಿತ್ಸೆ–ಲಸಿಕೆ ಅನುಸರಣೆಯ ಮೇಲೆ ಗಮನ ಹರಿಸಬೇಕು. ಕೋವಿಡ್ ಹರಡುವಿಕೆಯ ಅಪಾಯವನ್ನು ಕಡಿಮೆ ಮಾಡಲು ಅಗತ್ಯವಾದ ಸಾರ್ವಜನಿಕ ಆರೋಗ್ಯ ಕ್ರಮಗಳು ಮತ್ತು ಇತರ ವ್ಯವಸ್ಥೆಗಳನ್ನು ಅನುಸರಿಸಬೇಕು. ಈ ನಿಟ್ಟಿನಲ್ಲಿ ಮಾಸ್ಕ್ ಬಳಕೆ, ಕೈ ತೊಳೆಯುವಿಕೆ, ನೈರ್ಮಲ್ಯ ಮತ್ತು ದೈಹಿಕ ಅಂತರವನ್ನು ಕಾಪಾಡುವುದು ಅಗತ್ಯವಾಗಿದೆ ಎಂದು ಅವರು ತಿಳಿಸಿದ್ದಾರೆ.
ಸೋಂಕಿತರ ಹೆಚ್ಚಿನ ಮಾದರಿಗಳನ್ನು ವೈರಾಣು ವಂಶವಾಹಿ ಸಂರಚನಾ ವಿಶ್ಲೇಷಣೆಗೆ (ಜಿನೋಮ್ ಸೀಕ್ವೆನ್ಸಿಂಗ್) ಒಳಪಡಿಸಬೇಕು. ಇದರಿಂದ ದೇಶದಲ್ಲಿ ಹೊಸ ರೂಪಾಂತರಿ ತಳಿ ಪತ್ತೆ ಹಚ್ಚಲು ನೆರವಾಗಲಿದೆ ಎಂದೂ ಅವರು ಪತ್ರದಲ್ಲಿ ಬರೆದಿದ್ದಾರೆ.
‘ಎಲ್ಲ ಜಿಲ್ಲೆಗಳಲ್ಲೂ ಸಾಕಷ್ಟು ಪರೀಕ್ಷೆಗಳನ್ನು ಮಾಡಬೇಕು. ಆರ್ಟಿ–ಪಿಸಿಆರ್, ಆ್ಯಂಟಿಜೆನ್ ಪರೀಕ್ಷೆಗಳನ್ನು ನಡೆಸಬೇಕು. ಇದರ ಜತೆಗೆ ಆಸ್ಪತ್ರೆಗಳಲ್ಲಿ ಹಾಸಿಗೆ ಲಭ್ಯತೆಗಳ ವಿವರ ಖಚಿತಪಡಿಸಿಕೊಳ್ಳಬೇಕು. ಕೋವಿಡ್ ಉಲ್ಬಣಿಸಿದರೆ ಅದನ್ನು ನಿರ್ವಹಿಸುವ ಕುರಿತು ಆರೋಗ್ಯ ಕಾರ್ಯಕರ್ತರು ಸನ್ನದ್ಧರಾಗಿರುವ ಸಿದ್ಧತೆಯನ್ನು ಕೈಗೊಳ್ಳಬೇಕು. ಕೋವಿಡ್ ಲಸಿಕೆಯ ಕುರಿತು ಸಮುದಾಯದಲ್ಲಿ ಜಾಗೃತಿ ಮೂಡಿಸಬೇಕು. ಈ ಬಗ್ಗೆ ಎಲ್ಲ ರಾಜ್ಯಗಳು ವಿಶೇಷ ಗಮನಹರಿಸಬೇಕು’ ಎಂದು ಸೂಚಿಸಿದ್ದಾರೆ.
‘ಕೆಲ ವಾರಗಳಲ್ಲಿ ವಿಶ್ವದಾದ್ಯಂತ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ವರದಿಯಾಗುತ್ತಿವೆ. ಆದರೆ ಭಾರತದಲ್ಲಿ ಕೆಲವು ತಿಂಗಳುಗಳಿಂದ ನಿರಂತರವಾಗಿ ಕೋವಿಡ್ ಪ್ರಕರಣಗಳು ಇಳಿಕೆಯಾಗುತ್ತಿತ್ತಿವೆ. ಪ್ರಸ್ತುತ ದೇಶದಾದ್ಯಂತ ಪ್ರತಿದಿನ 153 ಹೊಸ ಪ್ರಕರಣಗಳು ವರದಿಯಾಗುತ್ತಿವೆ’ ಎಂದೂ ಭೂಷಣ್ ತಿಳಿಸಿದ್ದಾರೆ.
ಈ ಮಧ್ಯೆ ಆರೋಗ್ಯ ಸಚಿವಾಲಯವು, ಚೀನಾ ಮತ್ತು ಇತರ ದೇಶಗಳಿಂದ ಹೆಚ್ಚಿನ ಕೋವಿಡ್ ಪ್ರಕರಣಗಳು ವರದಿಯಾಗುತ್ತಿರುವ ಕಾರಣ, ಅಲ್ಲಿಂದ ಬರುವ ಪ್ರಯಾಣಿಕರಿಗೆ ಪ್ರಯಾಣದ 72 ಗಂಟೆಗಳಿಗೂ ಮೊದಲು ನಡೆಸಿದ ಆರ್ಟಿ–ಪಿಸಿಆರ್ ಪರೀಕ್ಷೆಯ ವರದಿ ಅಥವಾ ಸಂಪೂರ್ಣ ಕೋವಿಡ್ ವ್ಯಾಕ್ಸಿನ್ ದೃಢೀಕರಣ ಪತ್ರ ಒದಗಿಸುವ ಕುರಿತು ಚಿಂತನೆ ನಡೆಸುತ್ತಿದೆ. ಆದರೆ, ಜಾಗತಿಕ ಪರಿಸ್ಥಿತಿಯನ್ನು ಅವಲೋಕಿಸಿ, ಈ ಸಂಬಂಧ ಮುಂದಿನ ವಾರ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.