
ಗೋಳಗುಮ್ಮಟ ಆತ್ಮಹತ್ಯಾ ತಾಣವಾಗುತ್ತಿದೆಯೇ? – ಬಲವಂತದ ಮದುವೆಗೆ ಒಪ್ಪದೆ ಗೋಳಗುಮ್ಮಟದಿಂದ ಹಾರಿ ಪ್ರಾಣ ಬಿಟ್ಟ ಯುವತಿ…!
ವಿಜಯಪುರ: ನಾಡಿನ ಪ್ರಸಿದ್ಧ ಪ್ರವಾಸಿ ತಾಣವಾಗಿರುವ ವಿಜಯಪುರದ ಗೋಳಗುಮ್ಮಟದಲ್ಲಿ ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಎರಡು ತಿಂಗಳ ಹಿಂದೆ ವಯಸ್ಕರೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದ ಬೆನ್ನಲ್ಲೇ ಈಗ 20 ವರ್ಷದ ಯುವತಿಯೊಬ್ಬರು ಗುಮ್ಮಟದ ಮೇಲಿಂದ ಬಿದ್ದು ಆತ್ಮಹತ್ಯೆಗೆ ಶರಣಾಗಿದ್ದಾರೆ.ಪ್ರವಾಸಿ ತಾಣವಾದ ಗೋಳಗುಮ್ಮಟ ಈಗ ಆತ್ಮಹತ್ಯಾ ತಾಣವಾಗುತ್ತಿದೆಯೇ ಎಂಬ ಅನುಮಾನ ಕಾಡುತ್ತಿದೆ.
ಸೌಂದರ್ಯ ಬೆಂಗಳೂರು (20)ಎಂಬ ಯುವತಿಯು ವಿಜಯಪುರ ನಗರದ ರಾಣಿಬಗಿಚ್ ನಿವಾಸಿಯಾಗಿದ್ದು ಗೋಳಗುಮ್ಮಟದ ಮೇಲಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಯುವತಿಗೆ ಮನೆಯಲ್ಲಿ ಮದುವೆಗೆ ಸಿಧ್ಧತೆ ಮಾಡಿಕೊಂಡಿದ್ದು, ಇತ್ತೀಚಿಗೆ ಎಂಗೇಜ್ಮೆಂಟ್ ಕೂಡ ಆಗಿತ್ತು. ಆದರೆ ಮದುವೆ ಆಗುವುದಿಲ್ಲ ಎಂದು ನಿರಾಕರಿಸಿದಾಗ ಮನೆಯವರ ಮದುವೆಯ ಒತ್ತಡದಿಂದಾಗಿಯೇ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂಬ ಅನುಮಾನ ವ್ಯಕ್ತವಾಗಿದೆ.
ಸಾವನ್ನಪ್ಪಿದ ಯುವತಿಗೆ ಇನ್ನೊಬ್ಬ ಯುವಕನನ್ನು ಪ್ರೀತಿ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಮದುವೆಗೆ ನಿರಾಕರಣೆ ಮಾಡಿದ್ದು ಇದೇ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿರುವ ಅನುಮಾನ ಮೂಡಿದೆ. ಸಿಪಿಐ ಮಠಪತಿ ಹಾಗೂ ಐಪಿಎಸ್ ಸೀತಾರಾಮ್ ಸ್ಥಳಕ್ಕೆ ಆಗಮಿಸಿದ್ದು ಗೋಳಗುಮ್ಮಟ ಪೋಲಿಸರು ಇನ್ನಷ್ಟು ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ.
ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ಒಂದಾಗಿರುವ ವಿಜಯಪುರದ ಗೋಳಗುಮ್ಮಟ ನೋಡಲು ಸಾವಿರಾರು ಜನರು ಆಗಮಿಸುತ್ತಿದ್ದು ಇನ್ನೂ ಚಳಿಗಾಲ ಆಗಿದ್ದರಿಂದ ಶಾಲಾ ಮಕ್ಕಳು ಸೇರಿದಂತೆ ದೇಶ ವಿದೇಶಗಳಿಂದ ಪ್ರವಾಸಕ್ಕೆ ಬರುವವರ ಸಂಖ್ಯೆಯು ಹೆಚ್ಚಾಗುತ್ತದೆ. ಇಂತಹ ಸಮಯದಲ್ಲಿ ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಿರುವ ಕಾರಣ ಗೋಳಗುಮ್ಮಟ ನೋಡಲು ಬರುವ ಜನರಿಗೆ ತೊಂದರೆಯಾಗಬಹುದು ಅಥವಾ ಪ್ರವಾಸಿಗರ ಸಂಖ್ಯೆಯೂ ಕಡಿಮೆಯಾಗಬಹುದು ಎಂಬ ಆತಂಕ ಮೂಡಿದೆ.
ಸಿಬೀನ್ ಸೋಮನ್
