
ಕುವೆಂಪು ವಿಶ್ವವಿದ್ಯಾಲಯದಲ್ಲಿ ನಡೆದಿರುವ ಸ್ಮಾರ್ಟ್ ಕ್ಲಾಸ್ ಕಾಮಗಾರಿಗಳಲ್ಲಿ ಬಹುಕೋಟಿ ಹಗರಣ ನಡೆದಿರುವುದು ಬಹಿರಂಗಗೊಂಡಿದೆ. ಉಪಕರಣ ಖರೀದಿಯಲ್ಲಿ ಗೋಲ್ಮಾಲ್ ನಡೆಸಿರುವುದು ತನಿಖಾ ಸಮಿತಿಯ ವರದಿಯಿಂದ ತಿಳಿದು ಬಂದಿದೆ. ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿರುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಸ್ನಾತಕೋತ್ತರ ವಿದ್ಯಾರ್ಥಿಗಳು ಮತ್ತು ಎಲ್ಲ ವಿದ್ಯಾರ್ಥಿಗಳಿಗೆ ಸ್ಮಾರ್ಟ್ ಕ್ಲಾಸ್ ರೂಂ ಸೌಲಭ್ಯ ಒದಗಿಸುವ ದೃಷ್ಟಿಯಿಂದ ಸರಕಾರ ಬಿಡುಗಡೆ ಮಾಡಿದ್ದ 4.25 ಕೋಟಿ ರೂಪಾಯಿ ಅನುದಾನದಲ್ಲಿ ಈ ಹಗರಣ ನಡೆದಿದೆ.
ಹೈಲೈಟ್ಸ್:
- ಕುವೆಂಪು ವಿಶ್ವವಿದ್ಯಾಲಯದಲ್ಲಿ ನಡೆದಿರುವ ಸ್ಮಾರ್ಟ್ ಕ್ಲಾಸ್ ಕಾಮಗಾರಿಗಳಲ್ಲಿ ಬಹುಕೋಟಿ ಹಗರಣ ನಡೆದಿರುವುದು ಬಹಿರಂಗ
- ಉಪಕರಣ ಖರೀದಿಯಲ್ಲಿ ಗೋಲ್ಮಾಲ್, ತನಿಖಾ ಸಮಿತಿಯ ವರದಿಯಿಂದ ಬಟಾಬಯಲು
- ವಿವಿಯಲ್ಲಿರುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಸ್ನಾತಕೋತ್ತರ ವಿದ್ಯಾರ್ಥಿಗಳು ಮತ್ತು ಎಲ್ಲ ವಿದ್ಯಾರ್ಥಿಗಳಿಗೆ ಸ್ಮಾರ್ಟ್ ಕ್ಲಾಸ್ ರೂಂ
- ಈ ಸೌಲಭ್ಯ ಒದಗಿಸುವ ದೃಷ್ಟಿಯಿಂದ ಸರಕಾರ ಬಿಡುಗಡೆ ಮಾಡಿದ್ದ 4.25 ಕೋಟಿ ರೂಪಾಯಿ ಅನುದಾನದಲ್ಲಿ ಈ ಹಗರಣ
ಕುವೆಂಪು ವಿಶ್ವವಿದ್ಯಾಲಯದಲ್ಲಿ ನಡೆದಿರುವ ಸ್ಮಾರ್ಟ್ ಕ್ಲಾಸ್ ಕಾಮಗಾರಿಗಳಲ್ಲಿ ಬಹುಕೋಟಿ ಹಗರಣ ನಡೆದಿರುವುದು ತನಿಖಾ ಸಮಿತಿಯ ವರದಿಯಿಂದ ಬಹಿರಂಗಗೊಂಡಿದೆ.
ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿರುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಸ್ನಾತಕೋತ್ತರ ವಿದ್ಯಾರ್ಥಿಗಳು ಮತ್ತು ಎಲ್ಲ ವಿದ್ಯಾರ್ಥಿಗಳಿಗೆ ಸ್ಮಾರ್ಟ್ ಕ್ಲಾಸ್ ರೂಂ ಸೌಲಭ್ಯ ಒದಗಿಸುವ ದೃಷ್ಟಿಯಿಂದ ಸರಕಾರ 5 ಕೋಟಿ ರೂ. ಮಂಜೂರು ಮಾಡಿತ್ತು. ಇದರಲ್ಲಿ 4.25 ಕೋಟಿ ರೂ. ಅನುದಾನವನ್ನು ಸರಕಾರ ಎರಡು ಹಂತಗಳಲ್ಲಿ ಬಿಡುಗಡೆ ಮಾಡಿದೆ. ಕಾಮಗಾರಿಗಳಲ್ಲಿ ಅಪರಾತಪರಾ ಆಗಿರುವ ಬಗ್ಗೆ ಬಂದ ದೂರುಗಳ ಆಧಾರದ ಮೇಲೆ ತನಿಖೆಗೆ ಸಮಿತಿ ರಚಿಸಲಾಗಿತ್ತು. ಸಮಿತಿ ನೀಡಿದ ವರದಿಯಿಂದ ಅನುದಾನ ದುರ್ಬಳಕೆಯಾಗಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ.
ವಿವಿಯಲ್ಲಿ ಪ್ರತಿ ಕೊಠಡಿಗೆ 19.98 ಲಕ್ಷ ರೂ.ನಂತೆ 25 ಕೊಠಡಿಗಳಲ್ಲಿ ಸ್ಮಾರ್ಟ್ ಕ್ಲಾರ್ಸ್ ರೂಂ ಸ್ಥಾಪನೆಗೆ ಅನುದಾನ ಬಳಕೆ ಮಾಡಲಾಗಿದೆ. ಕೆಲವು ವಿಭಾಗಗಳಲ್ಲಿ ಸಿಂಡಿಕೇಟ್ ಅನುಮೋದನೆ ಪಡೆಯದೇ ಅನುದಾನ ಪಡೆದುಕೊಂಡಿರುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ.
ಸ್ಮಾರ್ಟ್ ಕ್ಲಾಸ್ನಲ್ಲಿ ಅಗತ್ಯವಿರುವ ಸ್ಪರ್ಧಾತ್ಮಕ ಪರೀಕ್ಷೆಯ ಪಠ್ಯಕ್ರಮವನ್ನು ಪರೀಕ್ಷೆ ನಡೆಸುವ ಸಂಸ್ಥೆಗಳು ನೀಡಬೇಕೇ ವಿನಾ ವಿವಿ ನೀಡಲು ಬರುವುದಿಲ್ಲ. ಈ ವಿಚಾರದಲ್ಲೂ ನಿಯಮ ಉಲ್ಲಂಘಿಸಲಾಗಿದೆ. ಕೆಲವು ತಂತ್ರಾಂಶಗಳು ಉಚಿತವಾಗಿ ದೊರೆಯುತ್ತಿದ್ದು, ಅವು ಬಳಸಲು ಸುಲಭವಾಗಿವೆ. ಆದರೆ, ವಿವಿಯ ಸ್ಮಾರ್ಟ್ ಕ್ಲಾಸ್ ರೂಂಗಳಲ್ಲಿ ಕೆಲ ತಂತ್ರಾಂಶಗಳನ್ನು ಹಣಕೊಟ್ಟು ಖರೀದಿಸುವ ಔಚಿತ್ಯ ಇರಲಿಲ್ಲ ಎಂದು ಸಮಿತಿ ಅಭಿಪ್ರಾಯಪಟ್ಟಿದೆ.
ಸ್ಮಾರ್ಟ್ ಕ್ಲಾಸ್ ಕಾಮಗಾರಿ ಮಾಡಬೇಕಿದ್ದ ಸಂಸ್ಥೆಯೊಂದಿಗೆ ಕುವೆಂಪು ವಿವಿ ಒಪ್ಪಂದ ಮಾಡಿಕೊಂಡಿದ್ದು, ಅದು ಸಹ ಉಲ್ಲಂಘನೆಯಾಗಿದೆ. ಒಪ್ಪಂದದಂತೆ, ಕಾಮಗಾರಿಯ ಒಟ್ಟು ಮೊತ್ತದ ಶೇ. 25ರಷ್ಟನ್ನು ಮುಂಗಡವಾಗಿ ಸಲ್ಲಿಸಿ ಎಲ್ಲ ಪರಿಕರಗಳನ್ನು ಯಶಸ್ವಿಯಾಗಿ ಪಡೆಯಬಹುದು. ಶೇ. 75ರಷ್ಟು ಹಣವನ್ನು ಕಾರ್ಯ ಯೋಜನೆ ಯಶಸ್ವಿಯಾಗಿ ಮುಗಿಸಿದ ನಂತರ ನೀಡಬೇಕೆಂದು ಕರಾರು ಮಾಡಿಕೊಳ್ಳಲಾಗಿತ್ತು. ಆದರೆ, ಸಮಿತಿಯು ವಿಭಾಗಗಳಿಗೆ ಭೇಟಿ ನೀಡಿ ಪರಿಶೀಲಿಸಿದಾಗ ಹಲವು ಪರಿಕರಗಳೇ ಅನುಷ್ಠಾನಗೊಂಡಿಲ್ಲ. ಆದರೆ, ಅನುದಾನ ಮಂಜೂರು ಮಾಡಲಾಗಿದೆ.
ಲವು ವಿಭಾಗಗಳಲ್ಲಿ ಪೂರೈಕೆಯಾಗಿರುವ ಬ್ಯಾಟರಿಗಳು ತುಂಬ ಕಳಪೆಯದ್ದಾಗಿವೆ. ಈಗಾಗಲೇ ಹಾನಿಯೂ ಆಗಿವೆ. ಯಾವುದೇ ವಿಭಾಗಗಳಲ್ಲಿ ವಿನೈಲ್ ನೆಲಹಾಸು ಸಹ ಮಾಡಿಲ್ಲ. ಆದರೂ ಅನುದಾನ ಮಂಜೂರು ಮಾಡಲಾಗಿದೆ. ವಿದ್ಯಾರ್ಥಿಗಳು ಕೂರುವುದಕ್ಕಾಗಿ ವ್ಯವಸ್ಥೆ ಮಾಡಿರುವ ಕುರ್ಚಿಗಳು ಕಳಪೆಯಾಗಿದ್ದು, ದಪ್ಪ ಇರುವವರು ಕೂರಲು ಕಷ್ಟವಾಗುತ್ತದೆ. 25 ಕ್ಲಾಸ್ ರೂಂಗಳಲ್ಲಿ ಪರಿಕರಗಳನ್ನು ಭಾಗಶಃ ಅಳವಡಿಸಿದ್ದು, ಒಪ್ಪಂದ ಇರದಿದ್ದರೂ ರಾಜ್ಯಶಾಸ್ತ್ರ ವಿಭಾಗದಲ್ಲಿ ಸ್ಮಾರ್ಟ್ ಕ್ಲಾಸ್ ಪರಿಕರ ಭಾಗಶಃ ಅಳವಡಿಸಲಾಗಿದೆ.
ಕಡೂರು ಸ್ನಾತಕೋತ್ತರ ಕೇಂದ್ರದಲ್ಲಿ ಪರಿಕರಗಳನ್ನು ಇಡಲಾಗಿದೆ. ಚಿಕ್ಕಮಗಳೂರು ಪಿಜಿ ಸೆಂಟರ್ನಲ್ಲಿ ಕಾಮಗಾರಿಯೇ ಆರಂಭಿಸಿಲ್ಲ.
* 15 ಕ್ಲಾಸ್ ರೂಂಗಳಲ್ಲಿಉಪಕರಣ, ತಂತ್ರಾಂಶಗಳಿಲ್ಲದೆ 71.76 ಲಕ್ಷ ರೂ. ವೆಚ್ಚ.
* ಕಳಪೆ ಗುಣಮಟ್ಟದ ಕೆಲವು ಪರಿಕರಗಳಿಗೆ ಹೆಚ್ಚಿನ ಮೊತ್ತ ಪಾವತಿ.
* 75 ಸಾವಿರ ಮಾರುಕಟ್ಟೆ ಮೌಲ್ಯದ ಎಸಿಗೆ 3.60 ಲಕ್ಷ ರೂ.!
* ಪ್ರತಿ ಸ್ಮಾರ್ಟ್ ಕ್ಲಾಸ್ ರೂಂಗೆ 48.38 ಲಕ್ಷ ರೂ. ದುಂದುವೆಚ್ಚ.
ವಿದ್ಯಾರ್ಥಿಗಳ ಶೈಕ್ಷಣಿಕ ಅನುಕೂಲಕ್ಕೆಂದು ನೀಡಿರುವ ಎಸ್ಸಿ, ಎಸ್ಟಿ ಅನುದಾನ ದುರ್ಬಳಕೆ ಮಾಡಲಾಗಿದೆ. ಹಗರಣದಲ್ಲಿ ಭಾಗಿಯಾದವರನ್ನು ತಕ್ಷಣ ಅಮಾನತುಗೊಳಿಸಿ ಉನ್ನತ ಮಟ್ಟದ ತನಿಖೆ ಕೈಗೊಳ್ಳಬೇಕು ಎಂದು ಶಂಕರಘಟ್ಟದ ಸಮಾಜ ಸೇವ ಶಶಿ ನೆಲ್ಲಿಸರ ಆಗ್ರಹಿಸಿದ್ದಾರೆ.
2022ರಲ್ಲಿ ಕುವೆಂಪು ವಿವಿಯಲ್ಲಿ ಸ್ಮಾರ್ಟ್ ಕ್ಲಾಸ್ಗೆ ಅನುದಾನ ಮಂಜೂರು ಮಾಡಲಾಗಿತ್ತು. ಆರೋಪಗಳು ಬಂದ ಹಿನ್ನೆಲೆಯಲ್ಲಿ ಬಾಕಿ ಇರುವ ಅನುದಾನ ಮಂಜೂರು ಮಾಡಿಲ್ಲ. ಈ ಸಂಬಂಧ ಈಗಾಗಲೇ ಸರಕಾರಕ್ಕೆ ಎರಡು ವರದಿಗಳನ್ನು ಸಲ್ಲಿಸಲಾಗಿದೆ. ಸರಕಾರದಿಂದ ಸೂಚನೆ ನೀಡಿದ ನಂತರ ಕ್ರಮಕೈಗೊಳ್ಳಲಾಗುವುದು ಎಂದು ಕುವೆಂಪು ವಿವಿ ಪ್ರಭಾರ ಕುಲಸಚಿವ ಸ್ನೇಹಲ್ ಸುಧಾಕರ್ ಲೋಖಂಡೆ ಹೇಳಿದ್ದಾರೆ.
inf:vk
