
Bengaluru/ಬೆಂಗಳೂರು, ಆಗಸ್ಟ್ 08, 2024 ರ ಲೋಕಸಭಾ ಚುನಾವಣೆಗೆ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರ ಕುಟುಂಬದಿಂದ ಯಾರು ಸ್ಪರ್ಧೆ ಮಾಡುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ನೀಡಿರುವ ಹೇಳಿಕೆ ತೀವ್ರ ಕುತೂಹಲಕ್ಕೆ ಕಾರಣವಾಗಿದ್ದು, ಈ ಬಗ್ಗೆ ಮಾಜಿ ಸಚಿವ ಹೆಚ್ ಡಿ ರೇವಣ್ಣ ಪ್ರತಿಕ್ರಿಯಿಸಿದ್ದಾರೆ.
ಈ ಕುರಿತು ಮಂಗಳವಾರ ಮಾಧ್ಯಮಗಳ ಜೊತೆಗೆ ವಿಧಾನಸೌಧದಲ್ಲಿ ಮಾತನಾಡಿದ ಅವರು, ಲೋಕಸಭೆಗೆ ಹಾಸನದಿಂದ ಪ್ರಜ್ವಲ್ ರೇವಣ್ಣ ಸ್ಪರ್ಧೆ ವಿಚಾರವಾಗಿ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ತೆಗೆದುಕೊಂಡ ತೀರ್ಮಾನವೇ ಅಂತಿಮ. ಈ ಬಗ್ಗೆ ಪಕ್ಷ ಯಾವ ತೀರ್ಮಾನ ಮಾಡುತ್ತೆ ಅದಕ್ಕೆ ಬದ್ಧ ಎಂದು ಹೇಳಿದ್ದಾರೆ.
ಇನ್ನು ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದ ಅವರು, ಸರ್ಕಾರ ಬಂದು ಎರಡುತಿಂಗಳಾಯ್ತು. ಗ್ಯಾರೆಂಟಿಗಳನ್ನ ಸರ್ಕಾರ ಜಾರಿಗೆ ತಂದಿದೆ, ಗ್ಯಾರೆಂಟಿ ಅನುಷ್ಠಾನ ಮಾಡಲಿ ನಮ್ಮ ತಕರಾರಿಲ್ಲ. ಆದರೆ, ರೈತಾಪಿ ವರ್ಗದ ಬಗ್ಗೆ ಚಿಂತನೆ ಮಾಡಬೇಕಿದೆ, ಗ್ಯಾರೆಂಟಿ ಯೋಜನೆಗಳಿಂದ ಅನ್ನದಾತನ ನಿರ್ಲಕ್ಷ್ಯ ಮಾಡಲಾಗಿದೆ ಎಂದು ಹೇಳಿದರು.
ಹೇಮಾವತಿ ಜಲಾಶಯದಿಂದ ಜೂನ್ ಮೊದಲ ವಾರದಲ್ಲಿ ನಾಲೆಗೆ ನೀರು ಬಿಡಬೇಕು. 6 ಲಕ್ಷದ 55 ಸಾವಿರ ಎಕರೆ ಪ್ರದೇಶ ಇದೆ, 43.67 ಟಿಎಂಸಿ ನೀರನ್ನ ಹಂಚಿಕೆ ಮಾಡಲಾಗಿದೆ. ಹೇಮಾವತಿಯಲ್ಲಿ 27 ಟಿಎಂಸಿ ನೀರು ಸ್ಟಾಕ್ ಇದೆ. ಮಹಾರಾಜರ ಕಾಲದಲ್ಲಿ ಎರಡು ಬೆಳೆಗೆ ನೀರು ಸಿಗ್ತಿತ್ತು, ಮಂಡ್ಯ,ಹಾಸನ,ತುಮಕೂರಿನಲ್ಲಿ ಕೆಲವೆಡೆ ಪೈರು ಒಣಗಿ ಹೋಗುತ್ತಿದೆ. ನಾಲೆಗೆ ನೀರು ಮಾತ್ರ ಬಿಡುಗಡೆ ಮಾಡುತ್ತಿಲ್ಲ ಎಂದು ಹೇಳಿದರು. ನೀರಾವರಿ ಸಲಹಾ ಸಮಿತಿ ಕರೆಯಬೇಕು. ನಾಲೆಗಳಿಗೆ ನೀರು ಹರಿಸಬೇಕು, ಬೆಳೆ ಒಣಗುವ ಮೂಲಕ ನಷ್ಟವಾಗುತ್ತಿದೆ. ರೈತರು,ಕೂಲಿ ಕಾರ್ಮಿಕರಿಗೆ ನಷ್ಟವಾಗುತ್ತಿದೆ. ನಾನು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದೇನೆ. ಡೆಪ್ಯೂಟಿ ಸಿಎಂಗೂ ಪತ್ರವನ್ನ ಬರೆದಿದ್ದೇವೆ. ನಾಳೆಯಿಂದಲೇ ನಾಲೆಗೆ ನೀರು ಹರಿಸಿ, ರೈತರನ್ನ ಸಂಕಷ್ಟದಿಂದ ಪಾರು ಮಾಡಿ ಎಂದು ಸರ್ಕಾರಕ್ಕೆ ಒತ್ತಾಯಿಸಿದರು.
ಗ್ಯಾರೆಂಟಿ ಜೊತೆ ರೈತರ ಕಡೆಗೂ ಗಮನಹರಿಸಿ. ರೈತರನ್ನ ಯಾವುದೇ ಕಾರಣಕ್ಕೆ ನಿರ್ಲಕ್ಷಿಸಬೇಡಿ, ರೈತರ ಬೆಳೆಗಳಿಗೆ ನೀರು ಬಿಡಿ. ನಮ್ಮ ರೈತರನ್ನ ಯಾಕೆ ನಿರ್ಲಕ್ಷ್ಯ ಮಾಡುತ್ತಿದ್ದಾರೆ. ಕೊಬರಿಗೆ ಬೆಳೆಗಾರರಿಗೆ 15 ಸಾವಿರ ಕೊಡ್ತೇವೆ ಎಂದರು. ಎಲ್ಲಿ ಇಲ್ಲಿಯವರೆಗೆ ಹಣ ಕೊಟ್ಟಿಲ್ಲ, ನಿಮಗೆ ನೀರು ಬಿಡೋಕೆ ಸಾಧ್ಯ ಇಲ್ವಾ? ಹಾಗಾದ್ರೆ ಬೆಳೆ ಪರಿಹಾರವನ್ನ ರೈತರಿಗೆ ಕೊಡಿ. ಇಲ್ಲಿ 25 ಸೀಟು ನೀವು ಗೆಲ್ಲುತ್ತಿರಾ? ತಮಿಳುನಾಡಿನಲ್ಲೂ 25 ಗೆಲ್ಲಬಹುದು ಎಂದು ಹೇಳಿದರು.
ತಮಿಳುನಾಡಿಗೆ ನೀರು ಬಿಡಲು ಹೊರಟಿದ್ದೀರಾ. ಐದು ಗ್ಯಾರೆಂಟಿ ಜೊತೆ ಆರನೇ ಗ್ಯಾರೆಂಟಿ ಕೊಡಿ, ರೈತರಿಗೆ ನೀರು ಬಿಟ್ಟು ಆರನೇ ಗ್ಯಾರೆಂಟಿ ಪೂರೈಸಿ ಇಲ್ಲವೇ ಬೆಳೆ ಪರಿಹಾರವನ್ನಾದ್ರೂ ಕೊಡಿ. ಲೋಕಸಭೆ ಚುನಾವಣೆಯಲ್ಲಿ ನೀವು 25 ಸ್ಥಾನಗಳನ್ನ ಗೆಲ್ಲಬಹುದು ಎಂದು ಸರ್ಕಾರಕ್ಕೆ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಲೇವಡಿ ಮಾಡಿದ್ದೇರೆ. ಲೋಕೋಪಯೋಗಿ, ಪಂಚಾಯತ್ ರಾಜ್ ಇಲಾಖೆಗೆ 2006 ರಲ್ಲಿ ನಮ್ಮ ಸರ್ಕಾರ 1000 ಸಹಾಯಕ ಎಂಜಿನಿಯರ್ಗಳನ್ನು ನೇಮಕ ಮಾಡಿತ್ತು. ಮೂರೇ ವರ್ಷದಲ್ಲಿ ನಾವು ನಿರ್ಣಯ ಮಾಡಿದ್ದೇವು. 2022 ರಲ್ಲಿ 320 ಸಹಾಯಕ ಎಂಜಿನಿಯರ್ಗಳನ್ನು ನೇಮಕ ಮಾಡಲಾಗಿತ್ತು. ಅವರಿಗೆ 16 ರಿಂದ 20 ವರ್ಷ ಸರ್ವೀಸ್ ಆಗಿದೆ. ಅವರಿಗೆ ಇನ್ನೂ ಮುಂಬಡ್ತಿ ನೀಡಿಲ್ಲ. ಯಾಕೆ ಬಡ್ತಿ ನೀಡಲು ಒದ್ದಾಡುತ್ತಿದ್ದೀರಿ. ಲೋಕೋಪಯೋಗಿ ಸಚಿವನಾಗಿ ಎಂಟು ವರ್ಷ ಕೆಲಸ ಮಾಡಿದ್ದೇನೆ. ಆದರೆ ನಾನು ಯಾವತ್ತೂ ಈ ರೀತಿ ಮಾಡಿರಲಿಲ್ಲ. ಯಾವ ಕಾರಣಕ್ಕೆ ಕೊಟ್ಟಿಲ್ಲ ಹೇಳಿ ಎಂದು ಪ್ರಶ್ನಿಸಿದರು.
