
DA Hike For Karnataka State Government Employees : ಲೋಕಸಭಾ ಚುನಾವಣೆ ಘೋಷಣೆಗೆ ಕ್ಷಣಗಣನೆ ಶುರುವಾಗಿರುವ ಹೊತ್ತಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ರಾಜ್ಯ ಸರ್ಕಾರಿ ನೌಕರರಿಗೆ ಬಿಗ್ ಗಿಫ್ಟ್ ನೀಡಿದೆ. ರಾಜ್ಯ ಸರ್ಕಾರಿ ನೌಕರರ ತುಟ್ಟಿ ಭತ್ಯೆಯನ್ನು ಶೇ.3.75ರಷ್ಟು ಏರಿಸಿ ಕರ್ನಾಟಕ ಸರ್ಕಾರ ಆದೇಶ ಹೊರಡಿಸಿದೆ. ಅದಲ್ಲದೇ ಜನವರಿ 1 ರಿಂದಲೇ ಈ ಆದೇಶ ಪೂರ್ವಾನ್ವಯವಾಗಲಿದೆ ಎಂದು ಕೂಡ ಸರ್ಕಾರ ತಿಳಿಸಿದೆ. ಕೆಲ ದಿನಗಳ ಹಿಂದಷ್ಟೇ ಕೇಂದ್ರ ಸರ್ಕಾರ ಕೇಂದ್ರ ಸರ್ಕಾರಿ ನೌಕರರ ಡಿಎ ಅನ್ನು ಶೇ.4ರಷ್ಟು ಏರಿಕೆ ಮಾಡಿ ಆದೇಶ ಹೊರಡಿಸಿತ್ತು.
ಹೈಲೈಟ್ಸ್:
- ರಾಜ್ಯ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ ನೀಡಿದ ಕರ್ನಾಟಕ ಸರ್ಕಾರ
- ರಾಜ್ಯ ಸರ್ಕಾರಿ ನೌಕರರ ತುಟ್ಟಿ ಭತ್ಯೆಯನ್ನು ಶೇ.3.75ರಷ್ಟು ಹೆಚ್ಚಳ
- ಶೇ.38.75ರಷ್ಟಿದ್ದ ತುಟ್ಟಿ ಭತ್ಯೆಯನ್ನು ಶೇ.42.5ಕ್ಕೆ ಹೆಚ್ಚಿಸಲು ನಿರ್ಧಾರ
ಬೆಂಗಳೂರು : ಲೋಕಸಭಾ ಚುನಾವಣೆಗೂ ಮುನ್ನ ರಾಜ್ಯ ಸರ್ಕಾರಿ ನೌಕರರಿಗೆ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಸಿಹಿ ಸುದ್ದಿ ನೀಡಿದೆ. ಸರ್ಕಾರಿ ನೌಕರರ ತುಟ್ಟಿ ಭತ್ಯೆಯನ್ನು ಶೇ.3.75ರಷ್ಟು ಹೆಚ್ಚಳಕ್ಕೆ ಸರ್ಕಾರ ನಿರ್ಧರಿಸಿದೆ. ಇನ್ನು, ಕೇಂದ್ರ ವೇತನ ನೀತಿಯಂತೆ ವೇತನ ಪಡೆಯುವ ಸರ್ಕಾರಿ ನೌಕರರ ತುಟ್ಟಿ ಭತ್ಯೆಯನ್ನು ಶೇ.4ರಷ್ಟು ಏರಿಸಿದೆ. ಇದರಿಂದ ರಾಜ್ಯದ ಬೊಕ್ಕಸಕ್ಕೆ ಪ್ರತಿ ವರ್ಷ 1792.71 ಕೋಟಿ ರೂ. ಹೆಚ್ಚುವರಿ ಹೊರೆ ಬೀಳಲಿದೆ ಎಂದು ಹೇಳಲಾಗಿದೆ.
ಸದ್ಯ ರಾಜ್ಯ ಸರ್ಕಾರಿ ನೌಕರರಿಗೆ ಶೇ.38.75ರಷ್ಟು ತುಟ್ಟಿ ಭತ್ಯೆ ಇತ್ತು. ಅದನ್ನು ಈಗ ಶೇ.42.5ಕ್ಕೆ ಹೆಚ್ಚಿಸಲು ಸರ್ಕಾರ ನಿರ್ಧರಿಸಿದೆ. ಅದರಂತೆ ಕೇಂದ್ರ ವೇತನ ನೀತಿಯಂತೆ ವೇತನ ಪಡೆಯುವವರ ತುಟ್ಟಿ ಭತ್ಯೆಯನ್ನು ಶೇ.46 ರಿಂದ ಶೇ.50ಕ್ಕೆ ಏರಿಸುವುದಾಗಿ ಸರ್ಕಾರ ತಿಳಿಸಿದೆ. ಜನವರಿ 1 ರಿಂದಲೇ ತುಟ್ಟಿ ಭತ್ಯೆ ಹೆಚ್ಚಳ ಪೂರ್ವಾನ್ವಯ ಆಗಲಿದೆ ಎಂದು ಸರ್ಕಾರ ಆದೇಶ ಹೊರಡಿಸಿದೆ.
ಶೇ.4ರಷ್ಟು ತುಟ್ಟಿ ಭತ್ಯೆ ಹೆಚ್ಚಳಕ್ಕೆ ಬೇಡಿಕೆ!
ಕೆಲ ದಿನಗಳ ಹಿಂದಷ್ಟೇ ರಾಜ್ಯ ಸರ್ಕಾರಿ ನೌಕರರ ಸಂಘ ರಾಜ್ಯ ಸರ್ಕಾರದ ಮುಂದೆ ಶೇ.4ರಷ್ಟು ತುಟ್ಟಿ ಭತ್ಯೆಯನ್ನು ಹೆಚ್ಚಳ ಮಾಡುವಂತೆ ಬೇಡಿಕೆ ಇಟ್ಟಿತ್ತು. ಕೇಂದ್ರ ಸರ್ಕಾರವು ಶೇ.4ರಷ್ಟು ತುಟ್ಟಿ ಭತ್ಯೆ ಹೆಚ್ಚಿಸಿ, ಜನವರಿ 1ರಂತೆ ಪೂರ್ವಾನ್ವಯವಾಗುವಂತೆ ಆದೇಶ ಹೊರಡಿಸಿತ್ತು. ಅದೇ ರೀತಿ ಕರ್ನಾಟಕದಲ್ಲೂ ತುಟ್ಟಿ ಭತ್ಯೆಯನ್ನು ಜನವರಿ 1ರಿಂದ ಪೂರ್ವಾನ್ವಯವಾಗುವಂತೆ ಹೆಚ್ಚಿಸಲು ರಾಜ್ಯ ಸರ್ಕಾರಕ್ಕೆ ನೌಕರರ ಸಂಘ ಪತ್ರ ಬರೆದು ಮನವಿ ಸಲ್ಲಿಸಿತ್ತು.
ಕೇಂದ್ರದಿಂದಲೂ ತುಟ್ಟಿ ಭತ್ಯೆ ಹೆಚ್ಚಳ
ಕಳೆದ ವಾರವಷ್ಟೇ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಕೇಂದ್ರ ಸಚಿವ ಸಂಪುಟ ಸಭೆ ನಡೆದಿತ್ತು. ಸಭೆಯಲ್ಲಿ ಸರ್ಕಾರಿ ನೌಕರರ ತುಟ್ಟಿ ಭತ್ಯೆಯನ್ನು ಕೇಂದ್ರ ಸರ್ಕಾರ ಶೇ.4ರಷ್ಟು ಹೆಚ್ಚಳ ಮಾಡಲು ಅನುಮೋದನೇ ನೀಡಿತ್ತು. ಕೇಂದ್ರ ಸರ್ಕಾರವೂ ಡಿಎ ಹೆಚ್ಚಳ ಮಾಡಿದ ಬಳಿಕ ರಾಜ್ಯ ಸರ್ಕಾರವು ಡಿಎ ಹೆಚ್ಚಳ ಮಾಡುತ್ತದೆ. ಅದರಂತೆ ಈಗ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಸರ್ಕಾರಿ ನೌಕರರ ತುಟ್ಟಿ ಭತ್ಯೆಯನ್ನು ಹೆಚ್ಚಳ ಮಾಡಿದೆ.