
Light Rain In Karnataka : ಕರ್ನಾಟಕದಲ್ಲಿ ಬಿಸಿಲಿನ ತಾಪಮಾನ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಲೇ ಇದೆ. ಈ ನಡುವೆ ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಜಿಲ್ಲೆಯಲ್ಲಿ ಫೆಬ್ರವರಿ 24 ಕ್ಕೆ ಹಗುರ ಮಳೆ ಬೀಳಲಿದೆ. ಇನ್ನು 8 ಜಿಲ್ಲೆಗಳಲ್ಲಿ ಬಿಸಿಲಿಂದ ತಾಪಮಾನ ಭಾರಿ ಹೆಚ್ಚಳ ಆಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಮಳೆಯಾಗುವ ಜಿಲ್ಲೆಗಳು ಹಾಗೂ ಬಿಸಿಲು ಹೆಚ್ಚಾಗುವ ಜಿಲ್ಲೆಗಳ ವಿವರ ಇಲ್ಲಿದೆ.
ಹೈಲೈಟ್ಸ್:
- ಕರ್ನಾಟಕದ ಕರಾವಳಿ ಮತ್ತು ದಕ್ಷಿಣ ಒಳನಾಡಿನ ಕೆಲವೆಡೆ ಫೆಬ್ರವರಿ 24 ರಂದು ಹಗುರ ಮಳೆ.
- ಕರ್ನಾಟಕದಾದ್ಯಂತ ತಾಪಮಾನ ಸಾಮಾನ್ಯಕ್ಕಿಂತ ಒಂದೆರಡು ಡಿಗ್ರಿ ಸೆಲ್ಸಿಯಸ್ ಹೆಚ್ಚಾಗುವ ಸಾಧ್ಯತೆ.
- ಮೈಸೂರು ಸೇರಿದಂತೆ 8 ಜಿಲ್ಲೆಗಳಲ್ಲಿ ಸಾಮಾನ್ಯಕ್ಕಿಂತ ಬಿಸಿಲಿನ ತಾಪಮಾನ ಹೆಚ್ಚು
ಬೆಂಗಳೂರು: ಕರ್ನಾಟಕದ ಕರಾವಳಿ ಮತ್ತು ದಕ್ಷಿಣ ಒಳನಾಡಿನ ಕೆಲವೆಡೆ ಫೆಬ್ರವರಿ 24 ರಂದು (ಸೋಮವಾರ) ಹಗುರ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
24 ರಂದು ಕರಾವಳಿಯ ಉತ್ತರ ಕನ್ನಡ, ಉಡುಪಿ ಮತ್ತು ದಕ್ಷಿಣ ಕನ್ನಡ, ದಕ್ಷಿಣ ಒಳನಾಡಿನ ಚಿಕ್ಕಮಗಳೂರು, ಹಾಸನ ಮತ್ತು ಕೊಡಗು ಜಿಲ್ಲೆಯ ಕೆಲ ಪ್ರದೇಶಗಳಲ್ಲಿ ಹಗುರ ಮಳೆಯಾಗಲಿದೆ. ರಾಜ್ಯದ ಉಳಿದೆಡೆ ಒಣ ಹವೆ ಇರಲಿದೆ
ಬಿಸಿಲು ಒಂದೆರಡು ಡಿಗ್ರಿ ಹೆಚ್ಚಳ
ಮುಂದಿನ 5 ದಿನಗಳವರೆಗೆ ಕರ್ನಾಟಕದ ಗರಿಷ್ಠ ತಾಪಮಾನದಲ್ಲಿ ಯಾವುದೇ ಬದಲಾವಣೆಯಾಗುವುದಿಲ್ಲ. ಉತ್ತರ ಒಳನಾಡಿನಲ್ಲಿ ಗರಿಷ್ಠ ತಾಪಮಾನವು ಸಾಮಾನ್ಯಕ್ಕಿಂತ 2-3 ಡಿಗ್ರಿ ಸೆಲ್ಸಿಯಸ್, ದಕ್ಷಿಣ ಒಳನಾಡಿನಲ್ಲಿ 1-2 ಡಿಗ್ರಿ ಸೆಲ್ಸಿಯಸ್ ಮತ್ತು ಕರಾವಳಿ ಕರ್ನಾಟಕದಾದ್ಯಂತ ಸಾಮಾನ್ಯಕ್ಕಿಂತ ಒಂದೆರಡು ಡಿಗ್ರಿ ಸೆಲ್ಸಿಯಸ್ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಇಲಾಖೆ ತಿಳಿಸಿದೆ.
8 ಜಿಲ್ಲೆಗಳಿಗೆ ಭಾರಿ ಬಿಸಿಲು
ಕಾರವಾರ, ಬೆಳಗಾವಿ, ಕಲಬುರಗಿ, ಬಾಗಲಕೋಟೆ, ಗದಗ ಮತ್ತು ದಕ್ಷಿಣ ಒಳನಾಡಿನ ಬೆಂಗಳೂರು ನಗರ, ಮಂಡ್ಯ, ಹಾಸನ ಮತ್ತು ಮೈಸೂರಿನಲ್ಲಿ ಸಾಮಾನ್ಯಕ್ಕಿಂತ ಬಿಸಿಲಿನ ತಾಪಮಾನ ಹೆಚ್ಚಿರಲಿದೆ.
ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ
ರಾಜಧಾನಿ ಬೆಂಗಳೂರಿನಲ್ಲಿ ಸೋಮವಾರದಿಂದ 4 ದಿನಗಳು ಭಾಗಶಃ ಮೋಡ ಕವಿದ ವಾತಾವರಣವಿರಲಿದೆ. ಕೆಲವೆಡೆ ಮುಂಜಾವಿನಲ್ಲಿ ದಟ್ಟ ಮಂಜು ಇರಲಿದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 33 ಡಿಗ್ರಿ ಸೆಲ್ಸಿಯಸ್ ಮತ್ತು 18 ಡಿಗ್ರಿ ಸೆಲ್ಸಿಯಸ್ ಇರುತ್ತದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ
ರಾಜಧಾನಿ ಬೆಂಗಳೂರಿನಲ್ಲಿ ಸೋಮವಾರದಿಂದ 4 ದಿನಗಳು ಭಾಗಶಃ ಮೋಡ ಕವಿದ ವಾತಾವರಣವಿರಲಿದೆ. ಕೆಲವೆಡೆ ಮುಂಜಾವಿನಲ್ಲಿ ದಟ್ಟ ಮಂಜು ಇರಲಿದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 33 ಡಿಗ್ರಿ ಸೆಲ್ಸಿಯಸ್ ಮತ್ತು 18 ಡಿಗ್ರಿ ಸೆಲ್ಸಿಯಸ್ ಇರುತ್ತದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಬೇಸಿಗೆ ಬೇಗೆ
ಫೆಬ್ರವರಿ ಅಂತ್ಯಕ್ಕೆ ಬೇಸಿಗೆ ಬೇಗೆ ಎಲ್ಲರನ್ನೂ ಬಾಧಿಸುತ್ತಿದೆ. ಉಷ್ಣಾಂಶ 35 ಡಿಗ್ರಿ ದಾಟುತ್ತಿರುವುದರಿಂದ ಸೂರ್ಯ ಪ್ರತಾಪಕ್ಕೆ ವೃದ್ದರು, ಮಕ್ಕಳು, ಗರ್ಭಿಣಿಯರು ಹೈರಾಣಾಗುತ್ತಿದ್ದು, ಮುಂಬರುವ ಬೇಸಿಗೆ ಹೇಗೆ ಎದುರಿಸಬೇಕೆಂಬ ಚಿಂತೆ ಜನರನ್ನು ಬಾಧಿಸುತ್ತಿದೆ. ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಬೇಸಿಗೆ ಕಾಟವಿದೆ.
ಗುಡಿಗುಂಡಾರ ಸೇರಿದ ಜನತೆ
ರಾಜ್ಯದ ಗ್ರಾಮೀಣ ಭಾಗದಲ್ಲಿ ವಯೋವೃದ್ಧರು ಬಿಸಿಲಿನ ಬೇಗೆಯಿಂದ ಪಾರಾಗಲು ಗ್ರಾಮಗಳಲ್ಲಿರುವ ಹಳೆ ಗುಡಿ ಆಶ್ರಯಿಸಿದ್ದಾರೆ. ಅಲ್ಲಿರುವ ಗಿಡ-ಮರಗಳು ಹಾಗೂ ದೇವಸ್ಥಾನದ ತಂಪು ವಾತಾವರಣದಲ್ಲಿ ಮಧ್ಯಾಹ್ನದ ಸಮಯ ದೂಡುತ್ತಿರುವುದು ಸಾಮಾನ್ಯವಾಗಿದೆ. ಮಧ್ಯಾಹ್ನ ಪ್ರಖರ ಬಿಸಿಲಿನಿಂದಾಗಿ ರಸ್ತೆಗಳಲ್ಲಿ ಜನಸಂಚಾರ ಕಡಿಮೆಯಾಗಿದೆ. ಇದರಿಂದಾಗಿ ಸಂಜೆ ನಾಲ್ಕು ಗಂಟೆವರೆಗೂ ರಸ್ತೆಗಳು ಜನರಿಲ್ಲದೇ ಬಿಕೋ ಎನ್ನುತ್ತಿವೆ. ಬಾಯಾರಿಕೆ ತಣಿಸಿಕೊಳ್ಳಲು ಬಹುತೇಕರು ಎಳನೀರು, ಕಲ್ಲಂಗಡಿ ಮತ್ತಿತರೆ ತಂಪು ಪಾನೀಯಗಳ ಮೊರೆ ಹೋಗುತ್ತಿದ್ದಾರೆ. ಇದರಿಂದಾಗಿ ಹಣ್ಣುಹಂಪಲು ವ್ಯಾಪಾರಿಗಳಿಗೆ ಬೇಸಿಗೆ ಶುಕ್ರದೆಸೆಯಾಗಿ ಪರಿಣಮಿಸಿದೆ.