
Metro : ನಮ್ಮ ಮೆಟ್ರೋ ಯೋಜನೆಯ ಎರಡನೇ ಹಂತದ ಎಚ್.ಎಸ್.ಆರ್. ಲೇಔಟ್ ಮೆಟ್ರೋ ರೈಲು ನಿಲ್ದಾಣ ನಿರ್ಮಾಣ ಕಾರ್ಯ ವೇಗ ಪಡೆದಿದೆ. ನಿರ್ಮಾಣ ಕಾಮಗಾರಿಗೆ 41 ಮರಗಳನ್ನು ಕತ್ತರಿಸಲು ಹಾಗೂ 20 ಮರಗಳನ್ನು ಸ್ಥಳಾಂತರಿಸಲು ಬೆಂಗಳೂರು ಬಿಎಂಆರ್ಸಿಎಲ್ಗೆ ಹೈಕೋರ್ಟ್ ಷರತ್ತಿನ ಅನುಮತಿ ನೀಡಿದೆ. ತೆರವುಗೊಳಿಸಿದ ಮರಗಳಿಗೆ ಒಂದು ಮರಕ್ಕೆ ಪರ್ಯಾಯವಾಗಿ 10 ಮರಗಳನ್ನು ನೆಡಬೇಕು ಎಂದು ಹೈಕೋರ್ಟ್ ಹೇಳಿದೆ.
ಬೆಂಗಳೂರು : ನಮ್ಮ ಮೆಟ್ರೋ ಯೋಜನೆಯ ಎರಡನೇ ಹಂತದ ಎಚ್.ಎಸ್.ಆರ್. ಲೇಔಟ್ ಮೆಟ್ರೋ ರೈಲು ನಿಲ್ದಾಣ ನಿರ್ಮಾಣಕ್ಕೆ 41 ಮರಗಳನ್ನು ಕತ್ತರಿಸಲು ಹಾಗೂ 20 ಮರಗಳನ್ನು ಸ್ಥಳಾಂತರಿಸಲು ಬೆಂಗಳೂರು ಬಿಎಂಆರ್ಸಿಎಲ್ಗೆ ಹೈಕೋರ್ಟ್ ಷರತ್ತಿನ ಅನುಮತಿ ನೀಡಿದೆ.
ಮೆಟ್ರೋ ಯೋಜನೆಗಾಗಿ ಬೇಕಾಬಿಟ್ಟಿ ಮರಗಳನ್ನು ಕಡಿಯದಂತೆ ನಿರ್ದೇಶನ ನೀಡುವಂತೆ ಕೋರಿ ಪರಿಸರವಾದಿ ದತ್ತಾತ್ರೇಯ ಟಿ. ದೇವರೆ ಹಾಗೂ ಬೆಂಗಳೂರು ಎನ್ವಿರಾನ್ಮೆಂಟ್ ಟ್ರಸ್ಟ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯು ಸಿಜೆ ಎನ್.ವಿ.ಅಂಜಾರಿಯಾ ಹಾಗೂ ನ್ಯಾ. ಕೆ.ವಿ.ಅರವಿಂದ್ ಅವರಿದ್ದ ವಿಭಾಗೀಯ ಪೀಠದ ಮುಂದೆ ವಿಚಾರಣೆಗೆ ಬಂದಿತ್ತು.
ಬಿಎಂಆರ್ಸಿಎಲ್ ಪರ ವಕೀಲರ ವಾದ ದಾಖಲಿಸಿಕೊಂಡ ನ್ಯಾಯಪೀಠ, ಮರ ಅಧಿಕಾರಿ ಹಾಗೂ ಬಿಬಿಎಂಪಿ ಉಪಸಂರಕ್ಷಣಾಧಿಕಾರಿ ಹೊರಡಿಸಿರುವ ಆದೇಶದಂತೆ 20 ಮರಗಳ ಸ್ಥಳಾಂತರ ಮತ್ತು 41 ಮರಗಳನ್ನು ತೆರವುಗೊಳಿಸಲು ಬಿಎಂಆರ್ಸಿಎಲ್ಗೆ ಅನುಮತಿ ನೀಡಿತು. ಅಲ್ಲದೆ, ತಜ್ಞರ ಸಮಿತಿ ವಿಧಿಸಿರುವ ಷರತ್ತುಗಳು ಮತ್ತು ಕಾಲ ಕಾಲಕ್ಕೆ ಹೈಕೋರ್ಟ್ ಹೊರಡಿಸಿರುವ ಆದೇಶ, ನಿರ್ದೇಶನಗಳನ್ನು ಬಿಎಂಆರ್ಸಿಎಲ್ ಪಾಲಿಸುವುದರ ಮೇಲೆ ಈ ಅನುಮತಿ ಅವಲಂಬಿತವಾಗಿದೆ ಎಂದು ನ್ಯಾಯಾಲಯ ಹೇಳಿದೆ.
ಬಿಎಂಆರ್ಸಿಎಲ್ ಪರ ವಾದಿಸಿದ ಹಿರಿಯ ವಕೀಲ ಧ್ಯಾನ್ ಚಿನ್ನಪ್ಪ, ‘ ಮಧ್ಯಂತರ ಮನವಿ ಸಲ್ಲಿಸಿ ಮೆಟ್ರೋ ಕಾಮಗಾರಿ ವೇಳೆ ಮರಗಳನ್ನು ತೆರವುಗೊಳಿಸುವ ಹಾಗೂ ಸ್ಥಳಾಂತರಿಸುವ ವಿಚಾರದಲ್ಲಿ ಹೈಕೋರ್ಟ್ ನೇಮಕ ಮಾಡಿರುವ ತಜ್ಞರ ಸಮಿತಿಯ ಶಿಫಾರಸುಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆ. ಅದರಂತೆ, ಅಗರದಿಂದ ಇಬ್ಬಲೂರು ಮಾರ್ಗದ ಎಚ್ಎಸ್ಆರ್ ಲೇಔಟ್ ಮೆಟ್ರೋ ರೈಲು ನಿಲ್ದಾಣದ ಆಗಮನ ಮತ್ತು ನಿರ್ಗಮನ ಭಾಗದಲ್ಲಿ ಬರುವ 20 ಮರ ಸ್ಥಳಾಂತರ ಮತ್ತು 41 ಮರ ತೆರವುಗೊಳಿಸಲು ಅನುಮತಿ ನೀಡಿ ಮರ ಅಧಿಕಾರಿ ಹಾಗೂ ಬಿಬಿಎಂಪಿ ಉಪ ಅರಣ್ಯ ಸಂರಕ್ಷಣಾಧಿಕಾರಿ 2024ರ ಜು.20 ರಂದು ಅಧಿಕೃತ ಆದೇಶ ಹೊರಡಿಸಿದ್ದಾರೆ,’ ಎಂದು ವಿವರಿಸಿದರು.
ತೆರವುಗೊಳಿಸಲು ಅನುಮತಿಸಿರುವ 41 ಮರಗಳ ಪೈಕಿ 21 ಮರಗಳು ಯೋಜನಾ ಪ್ರದೇಶದಲ್ಲಿ ಬರಲಿವೆ. ಇನ್ನುಳಿದ 20 ಮರಗಳು ಒಆರ್ಆರ್ ನಂಬರ್ 140 ರಿಂದ ಒಆರ್ಆರ್ ನಂಬರ್ 175 ರ ಮಧ್ಯೆ ಹೊರವರ್ತುಲ ರಸ್ತೆಯ ಎಡ ಮತ್ತು ಬಲಬದಿ ಬರಲಿವೆ. ಮರ ಅಧಿಕಾರಿ ಹಾಗೂ ಬಿಬಿಎಂಪಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಹೊರಡಿಸಿರುವ ಆದೇಶ ಆಧರಿಸಿ ಮುಂದುವರಿಯಲು ಬಿಎಂಆರ್ಸಿಎಲ್ಗೆ ಅನುಮತಿ ನೀಡಬೇಕು’ ಎಂದು ಕೋರಿದರು.
ಅವುಗಳು ವಸ್ತುಸ್ಥಿತಿ ಮತ್ತು ಬಾಳಿಕೆ ಹಾಗೂ ತೆರವುಗೊಳಿಸಿದ ಮರಗಳಿಗೆ ಒಂದು ಮರಕ್ಕೆ ಪರ್ಯಾಯವಾಗಿ 10 ಮರಗಳನ್ನು ನೆಡಬೇಕು ಎಂದು ಹೈಕೋರ್ಟ್ ಹೇಳಿದೆ. ಅದರ ಬಗ್ಗೆ ಪ್ರತಿ ಮೂರು ತಿಂಗಳಿಗೆ ವಸ್ತುಸ್ಥಿತಿ ವರದಿ ಸಲ್ಲಿಸಬೇಕು. ಆದರೆ, ಕಳೆದ ಒಂದು ವರ್ಷದಿಂದ ಅಂತಹ ವರದಿ ಸಲ್ಲಿಸಲಾಗಿಲ್ಲ. ಅದನ್ನು ನ್ಯಾಯಾಲಯ ಗಮನಿಸಬೇಕು’ ಎಂದು ನ್ಯಾಯಪೀಠಕ್ಕೆ ತಿಳಿಸಿದರು.
