
ಶಿವಮೊಗ್ಗ, ಆಗಸ್ಟ್ 08, ಸ್ವಾತಂತ್ರ್ಯ ದಿನಾಚರಣೆ 2023ರ ಹಿನ್ನಲೆಯಲ್ಲಿ ‘ಮೇರಿ ಮಾಟಿ ಮೇರಾ ದೇಶ್’ ಪರಿಕಲ್ಪನೆಯಡಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಸ್ವಾತಂತ್ರ್ಯ ದಿನಾಚರಣೆ ಸಮಾರಂಭದ ಸಿದ್ದತೆಗೆಗಳ ಕುರಿತು ಶಿವಮೊಗ್ಗ ಜಿಲ್ಲಾಧಿಕಾರಿಗಳು ಹಲವು ಸೂಚನೆಗಳನ್ನು ನೀಡಿದರು.
ಜಿಲ್ಲಾಧಿಕಾರಿ ಡಾ. ಆರ್. ಸೆಲ್ವಮಣಿ ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಸ್ವಾತಂತ್ರ್ಯ ದಿನಾಚರಣೆ 2023ರ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಆಗಸ್ಟ್ 15ರ ಮಂಗಳವಾರ ಶಿವಮೊಗ್ಗ ನಗರದ ಡಿಎಆರ್ ಕವಾಯತು ಮೈದಾನದಲ್ಲಿ ನಡೆಯುವ ಸಮಾರಂಭಕ್ಕೆ ಅಗತ್ಯವಾದ ಸಿದ್ದತೆಗಳನ್ನು ಮಾಡಿಕೊಳ್ಳುವಂತೆ ಸೂಚಿಸಿದರು.
ಶಿಷ್ಟಾಚಾರದಂತೆ ಆಹ್ವಾನ ಪತ್ರಿಕೆಯನ್ನು ಮುದ್ರಿಸಿ, ವಿತರಿಸಲು ಕ್ರಮವಹಿಸುವಂತೆ ಪಾಲಿಕೆ ಆಯುಕ್ತರು, ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿಗಳು ಹಾಗೂ ತಹಶೀಲ್ದಾರ್ಗೆ ತಿಳಿಸಿದರು. ಪೆರೇಡ್ ಹಾಗೂ ಸುತ್ತಮುತ್ತಲಿನ ಜಾಗವನ್ನು ಮುಂಚಿತವಾಗಿ ಸ್ವಚ್ಚಗೊಳಿಸಿ ಸಿದ್ದಗೊಳಿಸಬೇಕು. ನೀರಿನ ವ್ಯವಸ್ಥೆ, ಆಸನ ವ್ಯವಸ್ಥೆ, ವೇದಿಕೆ ಸಿದ್ದತೆ, ವೇದಿಕೆ ಅಲಂಕಾರ ಮಾಡುವಂತೆ ಪಾಲಿಕೆ, ಸಶಸ್ತ್ರ ಮೀಸಲು ಪಡೆ, ಲೋಕೋಪಯೋಗಿ ಇಲಾಖೆ, ತೋಟಗಾರಿಕೆ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು.
ಸರ್ಕಾರದ ಸುತ್ತೋಲೆಯಂತೆ ಎಲ್ಲಾ ಶಾಲಾ ಕಾಲೇಜುಗಳಲ್ಲಿ ಮತ್ತು ಕಚೇರಿಗಳಲ್ಲಿ ಪ್ರತಿ ವರ್ಷದಂತೆ ಧ್ವಜಾರೋಹಣಕ್ಕೆ ಸಿದ್ದತೆ ಮಾಡಿಕೊಳ್ಳಬೇಕು. ವಿದ್ಯುತ್ ದೀಪಗಳ ಅಲಂಕಾರ, ಪೊಲೀಸ್ ಭದ್ರತೆ, ಕುಡಿಯುವ ನೀರಿನ ವ್ಯವಸ್ಥೆ, ಆಂಬುಲೆನ್ಸ್, ಅಗ್ನಿಶಾಮಕ ವಾಹನದ ವ್ಯವಸ್ಥೆ, ಮಕ್ಕಳಿಗೆ ಸಿಹಿ ಹಂಚಿಕೆ ಹಾಗೂ ಆಸ್ಪತ್ರೆ ಮತ್ತು ಇತರೆ ಸಂಸ್ಥೆಗಳಲ್ಲಿ ಹಣ್ಣು, ಸಿಹಿ ಹಂಚಿಕೆ ಕುರಿತು ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಜವಾಬ್ದಾರಿ ಕೊಟ್ಟರು.
ಶಿವಮೊಗ್ಗ ನಗರದ ಶಾಲಾ, ಕಾಲೇಜು, ಪೊಲೀಸ್ ಇಲಾಖೆ, ಸ್ಕೌಟ್ಸ್ ಮತ್ತು ಗೈಡ್ಸ್, ಭಾರತ ಸೇವಾದಳ, ಎನ್ಸಿಸಿ, ಅಗ್ನಿ ಶಾಮಕ ದಳ, ಹೋಂಗಾಡ್ಸ್ ವತಿಯಿಂದ ಸಾಮೂಹಿಕ ಕವಾಯಿತು ಏರ್ಪಡಿಸಲಾಗುವುದು. ಮಳೆಯಿಂದ ರಕ್ಷಣೆ ಪಡೆಯಲು ಕವಾಯಿತು ಮೈದಾನದಲ್ಲಿ ಜರ್ಮನ್ ಟೆಂಟ್ ಹಾಕಿಸಲು ಪಿಡಬ್ಲ್ಯುಡಿ ಇಲಾಖೆಗೆ ಡಿಸಿ ಸೂಚಿಸಿದರು.
ಧ್ವಜಾರೋಹಣದ ನಂತರ ವಿದ್ಯಾರ್ಥಿಗಳಿಂದ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮವನ್ನು ವ್ಯವಸ್ಥಿತವಾಗಿ ಆಯೋಜಿಸಿ, ನಿಗದಿತ ವೇಳೆಯಲ್ಲಿ ಮುಗಿಯುವಂತೆ ಕ್ರಮ ಕೈಗೊಳ್ಳಲು ಡಿಡಿಪಿಐ ಮತ್ತು ಬಿಇಓಗೆ ನಿರ್ದೇಶನ ನೀಡಿದರು. ಜಿಲ್ಲಾಧಿಕಾರಿಗಳು ಎಲ್ಲ, ಗ್ರಾಮ ಪಂಚಾಯಿತಿ ಮತ್ತು ನಗರ ಸ್ಥಳೀಯ ಸಂಸ್ಥೆಗಳಲ್ಲಿ ಸ್ವಾತಂತ್ರ್ಯೋತ್ಸವದ ಅಂಗವಾಗಿ ಸರ್ಕಾರದ ಸೂಚನೆಯಂತೆ ‘ಮೇರಿ ಮಿಟ್ಟಿ ಮೇರಾ ದೇಶ್’ ಕಾರ್ಯಕ್ರಮ ಆಯೋಜಿಸುವಂತೆ ಜಿಲ್ಲಾ ಪಂಚಾಯಿತಿ ಮತ್ತು ಪಾಲಿಕೆ ಅಧಿಕಾರಿಗಳಿಗೆ ತಿಳಿಸಿದರು. ಆಗಸ್ಟ್ 9 ರಿಂದ ವಿವಿಧ ಕಾರ್ಯಕ್ರಮ; ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂತಿಮ ಘಟ್ಟವಾಗಿ ‘ಮೇರಿ ಮಾಟಿ ಮೇರಾ ದೇಶ್’ ಪರಿಕಲ್ಪನೆಯಡಿ ದೇಶಾದ್ಯಂತ ಗ್ರಾಮೀಣ, ನಗರ ಹಾಗೂ ರಾಜಧಾನಿ ಮಟ್ಟದಲ್ಲಿ ಆಗಸ್ಟ್ 9 ರಿಂದ 15ರವರೆಗೆ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಕಾರ್ಯಕ್ರಮದಲ್ಲಿ ಸರ್ವೋಚ್ಚ ತ್ಯಾಗ ಮಾಡಿದ ಭಾರತ ಮಾತೆಯ ವೀರ ಪುತ್ರರಿಗೆ ಶ್ರದ್ದಾಂಜಲಿ ಅರ್ಪಿಸಿ, ಅವರುಗಳ ಸ್ಮರಣಾರ್ಥ ಶಿಲಾಫಲಕಂ ಸ್ಥಾಪಿಸುವುದರೊಂದಿಗೆ ನಾನಾ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ.
ಸ್ವಾಂತಂತ್ರ್ಯ ಹೋರಾಟಗಾರರು, ಸೇನೆಯ ಶೌರ್ಯಪ್ರಶಸ್ತಿ ವಿಜೇತರು, ಸಶಸ್ತ್ರಪಡೆಗಳ ಹುತಾತ್ಮರ ವೀರ ನಾರಿಯರು, ಸೈನಿಕರು, ಮಾಜಿ ಸೈನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವುದರೊಂದಿಗೆ ಈ ಯೋಜನೆಯನ್ನು ಯಶಸ್ವಿಗೊಳಿಸಬೇಕು ಎಂದು ಕರೆ ನೀಡಲಾಗಿದೆ.
