
ನವದೆಹಲಿ: ರಸ್ತೆ ಅಪಘಾತದಲ್ಲಿ ಮೃತಪಟ್ಟಿರುವ ರೈತರೊಬ್ಬರ ಕುಟುಂಬಕ್ಕೆ ಆಸರೆಯಾದ ಸುಪ್ರೀಂ ಕೋರ್ಟ್,ಪರಿಹಾರದ ಮೊತ್ತವನ್ನು ₹17.66 ಲಕ್ಷದಿಂದ ₹25.20 ಲಕ್ಷಕ್ಕೆ ಏರಿಕೆ ಮಾಡಿ ಆದೇಶ ನೀಡಿದೆ
ಮೃತ ರೈತ ಜಗಜೀತ್ ಸಿಂಗ್(35) ಅವರು ಪದವೀಧರರಾಗಿದ್ದು, ಗ್ರಾಮದ ಮುಖಂಡರಾಗಿದ್ದರು’ ಎಂದು ನ್ಯಾಯಮೂರ್ತಿಗಳಾದ ಕೃಷ್ಣ ಮುರಾರಿ ಮತ್ತು ಎಸ್. ರವೀಂದ್ರ ಭಟ್ ಅವರಿದ್ದ ನ್ಯಾಯಪೀಠ ಹೇಳಿದೆ.
ಜಗಜೀತ್ ಅವರು 66 ಎಕರೆ ಭೂಮಿಯಲ್ಲಿ ಕೃಷಿ ಮಾಡುತ್ತಿದ್ದರು. ಅದರಿಂದ ಬರುತ್ತಿದ್ದ ಆದಾಯದ ಮೂರನೇ ಒಂದು ಭಾಗಕ್ಕೆ ಅವರು ಅರ್ಹರಾಗಿದ್ದಾರೆ ಎಂದೂ ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
‘ಜಗಜೀತ್ ಅವರು ಸಾಗುವಳಿ ಮಾಡುತ್ತಿದ್ದ ಭೂಮಿಯಲ್ಲಿ 12 ಎಕರೆ ಮಾತ್ರ ಅವರದ್ದಾಗಿತ್ತು. ಉಳಿದದ್ದು ಅವರ ಕುಟುಂಬದವರಿಗೆ ಸೇರಿದ್ದು’ ಎಂದು ಮೋಟಾರು ವಾಹನಗಳ ಅಪಘಾತದಲ್ಲಿ ಸಂತ್ರಸ್ತರಿಗೆ ಪರಿಹಾರ ಒದಗಿಸುವ ನ್ಯಾಯಮಂಡಳಿಯು ಪರಿಹಾರ ನಿರ್ಧರಿಸುವಾಗ ಹೇಳಿತ್ತು ಮತ್ತು ₹6.60 ಲಕ್ಷ ಪರಿಹಾರ ಮಂಜೂರು ಮಾಡಿತ್ತು.
ಇದನ್ನು ಪ್ರಶ್ನಿಸಿ ಜಗಜೀತ್ ಅವರ ಕುಟುಂಬದವರು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಮೊರೆ ಹೋಗಿದ್ದರು. ₹17.66 ಲಕ್ಷ ಪರಿಹಾರ ನೀಡುವಂತೆ ಹೈಕೋರ್ಟ್ ಆದೇಶಿಸಿತ್ತು. ಇದರ ವಿರುದ್ಧ ಜಗಜೀತ್ ಅವರ ಕುಟುಂಬದವರು ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದರು.
2004 ಸೆಪ್ಟೆಂಬರ್ 29ರಂದು ಜಗಜೀತ್ ಅವರು ಇತರ ಇಬ್ಬರು ಪ್ರಯಾಣಿಕರೊಂದಿಗೆ ಚಂಡೀಗಢದಿಂದ ಕಾರಿನಲ್ಲಿ ಮರಳುತ್ತಿದ್ದಾಗ, ಇವರು ಸಂಚರಿಸುತ್ತಿದ್ದ ಕಾರಿಗೆ ಟ್ರಕ್ ಡಿಕ್ಕಿಹೊಡೆದು ಅಪಘಾತ ಸಂಭವಿಸಿತ್ತು. ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಅವರು ಬಳಿಕ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು.