
Gopala Krishna Beluru Challenge To BJP : ಕಾಂಗ್ರೆಸ್ ಸರ್ಕಾರ ಪತನವಾಗುತ್ತೆ ಎಂದು ಹೇಳಿಕೆ ನೀಡಿರುವ ಬಿಜೆಪಿ ನಾಯಕರ ವಿರುದ್ಧ ಸಾಗರ ಶಾಸಕ ಗೋಪಾಲಕೃಷ್ಣ ಬೇಳೂರು ಕಿಡಿಕಾರಿದ್ದಾರೆ. ಈ ಬಗ್ಗೆ ಮಾಹಿತಿ ಇಲ್ಲಿದೆ.
ಹೈಲೈಟ್ಸ್:
- ತಾಕತ್ ಧಮ್ ಇದ್ರೆ ಸರ್ಕಾರ ಉರುಳಿಸಿ ನೋಡೋಣ ಎಂದು ಬಿಜೆಪಿಗೆ ಬೇಳೂರು ಸವಾಲ್.
- ರಮೇಶ್ ಜಾರಕಿಹೊಳಿಗೆ ಹುಚ್ಚು ಹಿಡಿದಿದೆ ಎಂದು ಕಿಡಿಕಾರಿದ ಬೇಳೂರು.
- ಮೂರು ಬಾರಿ ಶಾಸಕನಾದ್ರೂ ಇಲ್ಲೇ ಇದ್ದೇನೆ, ನಾನು ಸಾಮಾನ್ಯ ಕೆರೆಯಪ್ಪನ ಮಗ, ಸಿಎಂ ಮಗ ಅಲ್ಲ ಎಂದು ಬೇಳೂರು ಗೋಪಾಲಕೃಷ್ಣ ಬೇಸರ.
ಶಿವಮೊಗ್ಗ: ನಾನು ಚಾಲೆಂಜ್ ಮಾಡುತ್ತೇನೆ ನಿಮಗೆ ತಾಕತ್ ಧಮ್ ಇದ್ರೆ ರಾಜ್ಯ ಸರ್ಕಾರವನ್ನು ಉರುಳಿಸಿ ನೋಡೋಣ ಎಂದು ಸಾಗರ ಶಾಸಕ ಗೋಪಾಲಕೃಷ್ಣ ಬೇಳೂರು ಬಿಜೆಪಿಗೆ ಸವಾಲು ಹಾಕಿದ್ದಾರೆ.
ಹೊಸನಗರ ತಾಲೂಕು ರಿಪ್ಪನ್ ಪೇಟೆಯಲ್ಲಿ ಬುಧವಾರ ಮಾಧ್ಯಮಗಳೊಂದಿಗೆ ಮಾತನಾಡಿ, ” ವಿಪಕ್ಷ ಸ್ಥಾನದಲ್ಲಿರುವ ಬಿಜೆಪಿಯವರಿಗೆ, ಕಾಂಗ್ರೆಸ್ ಪಕ್ಷಕ್ಕೆ 136 ಸ್ಥಾನಗಳು ಬಂದಿರುವುದನ್ನ ತಡೆದುಕೊಳ್ಳಲು ಆಗುತ್ತಿಲ್ಲ. ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಕೆಲವರು ಆಪರೇಷನ್ ಕಮಲ ಮಾಡುತ್ತೇವೆ ಎಂದು ಹೇಳುತ್ತಿದ್ದಾರೆ ” ಎಂದರು.
ನಿಮ್ಮ ಅಸ್ತಿತ್ವವನ್ನು ನೀವು ಉಳಿಸಿಕೊಳ್ಳಿ
ಸರ್ಕಾರ ಬಂದು ಕೇವಲ ಐದು ತಿಂಗಳು ಆಗಿದೆ. ಸರ್ಕಾರ ಉರುಳಿ ಹೋಗುತ್ತೆ ಎಂದು ಹೇಳುತ್ತಿದ್ದಾರೆ. ಸರ್ಕಾರ ಉರುಳಿ ಹೋಗಲು ಸಾಧ್ಯವಿಲ್ಲ. ನಾನು ಚಾಲೆಂಜ್ ಮಾಡುತ್ತೇನೆ ನಿಮಗೆ ತಾಕತ್ ಧಮ್ ಇದ್ರೆ ಉರುಳಿಸಿ ನೋಡೋಣ. ಆಪರೇಷನ್ ಕಮಲ ಮಾಡಲು ಹೊರಟಿರುವವರ ಬಗ್ಗೆ ನಾನ್ ಹೇಳೋದಿಷ್ಟೇ, ನಿಮ್ಮ ಅಸ್ತಿತ್ವವನ್ನು ನೀವು ಉಳಿಸಿಕೊಳ್ಳಿ ಎಂದು ಸವಾಲು ಹಾಕಿದರು.
ರಾಜ್ಯದ ಜನ ಕಾಂಗ್ರೆಸ್ ಸರ್ಕಾರವನ್ನು ಆಯ್ಕೆ ಮಾಡಿದ್ದಾರೆ. ಐದು ವರ್ಷ ನಿರಾತಂಕವಾಗಿ ಸರ್ಕಾರ ಇರುತ್ತದೆ. ಸಿಎಂ ಹಾಗೂ ಡಿಸಿಎಂ ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಐದು ತಿಂಗಳಿನಲ್ಲಿ ಎಲ್ಲಾ ಅಭಿವೃದ್ಧಿ ಮಾಡಲು ಸಾಧ್ಯವಿಲ್ಲ, ಕಾಲಾವಕಾಶ ಬೇಕು ಎಂದು ಸಾಗರ ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.
ಶಾಸಕರನ್ನು ಖರೀದಿ ಮಾಡಲು ತಾಕತ್ ಇದೆಯಾ?
ಆ ರಮೇಶ್ ಜಾರಕಿಹೊಳಿ, ಸಿನಿಮಾ ನಟ ಸಿಪಿ ಯೋಗೀಶ್ವರ್ ಅಂಥವರು ಒಂದೆರಡು ಜನ ಸೇರಿಕೊಂಡು ಆಪರೇಷನ್ ಕಮಲ ಅಂತ ಹೊರಟಿದ್ದಾರೆ. ಅಂದು ಬಿ ಎಸ್ ಯಡಿಯೂರಪ್ಪ ಹಾಗೂ ಅವರ ಮಗ ಬಿ ವೈ ವಿಜಯೇಂದ್ರ ಬಿಟ್ಟಿ ದುಡ್ಡಿತ್ತು ಆಪರೇಷನ್ ಕಮಲ ಮಾಡಿದರು. ಹಣ ಕೊಟ್ಟು 17 ಜನರನ್ನು ಖರೀದಿ ಮಾಡಿದರು. ಈಗ ಇಷ್ಟು ಶಾಸಕರನ್ನು ಖರೀದಿ ಮಾಡಲು ಬಿಜೆಪಿಗೆ ಸಾಧ್ಯನಾ? ಆ ತಾಕತ್ ಇದೆಯಾ? ಅಂತವರು ಯಾರಿದ್ದಾರೆ? ಅಂತಹ ವಾತಾವರಣ ಈಗ ಇಲ್ಲ. ನನಗೆ ಗೊತ್ತಿರುವ ಹಾಗೆ ನಮ್ಮ ಎಂಎಲ್ಎಗಳು ಹೋಗುವ ಪರಿಸ್ಥಿತಿ ಇಲ್ಲ ಎಂದರು.
ರಮೇಶ್ ಜಾರಕಿಹೊಳಿಗೆ ಹುಚ್ಚು ಹಿಡಿದಿರಬೇಕು
ರಮೇಶ್ ಜಾರಕಿಹೊಳಿ ರಾಷ್ಟ್ರಪತಿ ಆಡಳಿತ ತರುತ್ತೇವೆ ಎಂದು ಹೇಳಿದ್ದಾರೆ. ಯಾವ ತರಹದ ರಾಷ್ಟ್ರಪತಿ ಆಡಳಿತ ತರ್ತಾರೆ? ಯಾವ ಉದ್ದೇಶದಿಂದ ತರುತ್ತೀರಿ? ರಮೇಶ್ ಜಾರಕಿಹೊಳಿಗೆ ಹುಚ್ಚು ಹಿಡಿದಿರಬೇಕು. ಹುಚ್ಚರೆಲ್ಲ ಹೀಗೆ ಮಾಡುವುದು. ಅವರಿಗೆ ನೆಲೆ ಇಲ್ಲ, ಪಕ್ಷದಲ್ಲಿ ಬೆಲೆ ಇಲ್ಲ. ನಮ್ಮ ಸರ್ಕಾರ ಅಧಿಕಾರದಲ್ಲಿ ಇರುವುದರಿಂದ ಅವರ ಎಲ್ಲಾ ಪ್ರಕರಣಗಳು ಮುನ್ನೆಲೆಗೆ ಬರಲಿವೆ. ಹಾಗಾಗಿ ಕಾಂಗ್ರೆಸ್ ಭಯ ಅವರಿಗೆ ಕಾಡುತ್ತಿದೆ. ಅದರ ಜೊತೆಗೆ ಈಗ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಒಬ್ಬರು ಸೇರಿಕೊಂಡು ಬಿಟ್ಟಿದ್ದಾರೆ. ಅವೆಲ್ಲ ನಡೆಯೋದಿಲ್ಲ ಎಂದು ಬೇಳೂರು ಹೇಳಿಕೆ ನೀಡಿದರು.