
ದಾವಣಗೆರೆ ಜಿಲ್ಲೆಯ ಜಗಳೂರು ತಾಲ್ಲೂಕಿನ ಸಂಗೇನಹಳ್ಳಿಯ ಕೆರೆ 15 ವರ್ಷಗಳ ನಂತರ ತುಂಬಿದ್ದು, ಕೋಡಿ ನೀರು ಕುದುರೆ ಲಾಳದ ಆಕಾರದಲ್ಲಿ ಧುಮ್ಮಿಕ್ಕುತ್ತಿರುವುದನ್ನು ನೋಡಲು ಜನಸಾಗರವೇ ಹರಿದುಬರುತ್ತಿದೆ.
ಬೆಂಗಳೂರು: ರಾಜ್ಯದ ಕೆಲ ಜಿಲ್ಲೆಗಳಲ್ಲಿ ಬುಧವಾರವೂ ಮಳೆಯಾಗಿದೆ. ಸಿಡಿಲು ಬಡಿದು ಮೂವರು ಮೃತಪಟ್ಟಿದ್ದು, ಐದು ಜಾನುವಾರುಗಳು ಸಾವನ್ನಪ್ಪಿವೆ. ಕೆಲವೆಡೆ ರಸ್ತೆ ಸಂಚಾರಕ್ಕೆ ತೊಂದರೆಯಾಗಿದ್ದರೆ, ಅನೇಕ ಕಡೆಗಳಲ್ಲಿ ಜಮೀನುಗಳಿಗೆ ನೀರು ನುಗ್ಗಿ ಬೆಳೆಗಳಿಗೆ ಹಾನಿಯಾಗಿದೆ
ಬಾಗಲಕೋಟೆ ಜಿಲ್ಲೆಯ ವರ್ಚಗಲ್ ಗ್ರಾಮದ ರೈತ ಕೃಷ್ಣಪ್ಪ ಗುಡದನ್ನವರ (30), ಕಲಬುರಗಿ ಜಿಲ್ಲೆಯ ಸೇಡಂ ತಾಲ್ಲೂಕಿನ ಪಿಲ್ಲಿಗುಂಟಾ ತಾಂಡಾದ ತುಳಜ್ಯಾ ನಾಯಕ (44) ಮತ್ತು ಅವರ ಪುತ್ರ ಅವಿನಾಶ (16) ಎಂಬುವವರು ಸಿಡಿಲು ಬಡಿದು ಮೃತಪಟ್ಟಿದ್ದಾರೆ.
ಯಾದಗಿರಿ ಜಿಲ್ಲೆಯ ಶಹಾಪುರ ತಾಲ್ಲೂಕಿನ ಚಾಮನಾಳ ತೋಟದ ಮನೆಯ ಕೊಟ್ಟಿಗೆಯಲ್ಲಿದ್ದ ಎರಡು ಎತ್ತು, ಆಕಳು ಮತ್ತು ಎಮ್ಮೆ, ಕಲಬುರಗಿ ತಾಲ್ಲೂಕಿನ ಹಂಗರಗಾ (ಕೆ) ಗ್ರಾಮದಲ್ಲಿ ಎಮ್ಮೆ ಸಿಡಿಲು ಬಡಿದು ಮೃತಪಟ್ಟಿವೆ.
ಧಾರವಾಡ ಜಿಲ್ಲೆಯ ಕಲಘಟಗಿ ತಾಲ್ಲೂಕಿನ ಗಂಜಿಗಟ್ಟಿ ದೊಡ್ಡಕೆರೆ ಸೇತುವೆ ಬಳಿ ನೀರಿನಲ್ಲಿ ಕೊಚ್ಚಿಹೋಗುತ್ತಿದ್ದ ವ್ಯಕ್ತಿಯನ್ನು ಗ್ರಾಮಸ್ಥರು ರಕ್ಷಿಸಿದ್ದಾರೆ.
ಸತತವಾಗಿ ಸುರಿಯುತ್ತಿರುವ ಮಳೆಗೆ ವಿಜಯನಗರ ಜಿಲ್ಲೆಯಲ್ಲಿ 42, ಬಳ್ಳಾರಿ ಜಿಲ್ಲೆಯ ವಿವಿಧ ಕಡೆಗಳಲ್ಲಿ 18 ಮನೆಗಳು ಭಾಗಶಃ ಕುಸಿದು ಬಿದ್ದಿವೆ. ವಿಜಯನಗರ ಜಿಲ್ಲೆ ಹರಪನಹಳ್ಳಿ ತಾಲ್ಲೂಕಿನ ಮತ್ತಿಹಳ್ಳಿಯಲ್ಲಿ 20 ಮನೆಗಳಿಗೆ ನೀರು ನುಗ್ಗಿದೆ.
ಬಾದಾಮಿಯಲ್ಲಿ ಮತ್ತೆ ಅಗಸ್ತ್ಯ ತೀರ್ಥ ಹೊಂಡ ಕೋಡಿ ಬಿದ್ದಿರುವುದರಿಂದ ರಸ್ತೆಗಳಲ್ಲಿ ಎರಡು ಅಡಿಗಳಷ್ಟು ನೀರು ಹರಿದ ಪರಿಣಾಮ ಸಂಚಾರಕ್ಕೆ ತೊಂದರೆಯಾಯಿತು.
ಕೋಲಾರ ನಗರ ಹಾಗೂ ಗ್ರಾಮಾಂತರ ಪ್ರದೇಶದ ವಿವಿಧೆಡೆ ಧಾರಾಕಾರ ಮಳೆಯಾಗಿದೆ. ಮುಳಬಾಗಿಲು ತಾಲ್ಲೂಕಿನ ಗುಮ್ಮಕಲ್ಲು ಗ್ರಾಮದಲ್ಲಿ 9.5 ಸೆಂ.ಮೀ ಮಳೆಯಾಗಿದ್ದು, ಇದು ಜಿಲ್ಲೆಯಲ್ಲಿ ಅತ್ಯಧಿಕ ಮಳೆಯಾಗಿರುವ ಪ್ರದೇಶ.
ಕಲಬುರಗಿ ಹಾಗೂ ಯಾದಗಿರಿ ಜಿಲ್ಲೆಗಳಲ್ಲಿ ಸುರಿದ ಮಳೆಯಿಂದಾಗಿ, ಭತ್ತ, ಹತ್ತಿ ಹಾಗೂ ತೊಗರಿ ಬೆಳೆಗಳಿಗೆ ಹಾನಿಯಾಗಿದೆ. ಧಾರವಾಡ ತಾಲ್ಲೂಕಿನ ತಡಕೋಡದ 101 ಎಕರೆ ವಿಸ್ತೀರ್ಣದ ಕೆರೆ ತುಂಬಿ ಕೋಡಿ ಬಿದ್ದಿದ್ದು, ಬೆಳೆಗಳನ್ನು ರಕ್ಷಿಸಿಕೊಳ್ಳಲು ಕೃಷಿಕರು ಪರದಾಡಿದರು. ಬೆಳಗಾವಿ ನಗರವೂ ಸೇರಿದಂತೆ ಜಿಲ್ಲೆಯ ಹಲವೆಡೆ ಉತ್ತಮ ಮಳೆ ಸುರಿಯಿತು.
Info:pvn