
ವಿಜಯಪುರ(ದೇವನಹಳ್ಳಿ): ಕುಂಬಾರಿಕೆಯ ವೃತ್ತಿಯನ್ನೇ ನಂಬಿಕೊಂಡು ಹಲವು ವರ್ಷಗಳಿಂದ ಜೀವನ ರೂಪಿಸಿಕೊಂಡಿರುವ ಹಲವು ಕುಟುಂಬಗಳಿಗೆ ವಂಶಪಾರಂಪರ್ಯದ ವೃತ್ತಿ ಮುಂದುವರಿಸಲು ಮಣ್ಣಿನ ಕೊರತೆ ಎದುರಾಗಿದೆ.
ಇತ್ತಿಚೆಗೆ ಸುರಿದ ಮಳೆಯಿಂದ ಕೆರೆ, ಕುಂಟೆ ಭರ್ತಿಯಾಗಿವೆ. ಕೆರೆಗಳಲ್ಲಿ ನೀರು ತುಂಬಿಕೊಂಡಿರುವುದರಿಂದ ಮಡಿಕೆ ತಯಾರಿಸುವ ಮಣ್ಣಿನ ಕೊರತೆ ಹೆಚ್ಚಾಗಿದೆ.
ಕೆರೆಗಳಲ್ಲಿ ನೀರು ತುಂಬಿಕೊಂಡಿರುವುದರಿಂದ ಸೂಕ್ತ ಮಣ್ಣಿನ ಕೊರತೆ ಹೆಚ್ಚಾಗಿದೆ. ದುಬಾರಿ ಹಣ ನೀಡಿ ಮಣ್ಣು ಖರೀದಿಸುವ ಅನಿವಾರ್ಯತೆ ಎದುರಾಗಿದೆ.ಒಂದು ಮಡಿಕೆ ತಯಾರಿಕೆಗೆ ₹35-₹40 ವೆಚ್ಚವಾಗುತ್ತದೆ. ಅದನ್ನು ನಾವು ₹50-₹60 ಮಾರಾಟ ಮಾಡುತ್ತೇವೆ ಎನ್ನುತ್ತಾರೆ ಕೋರಮಂಗಲ ಗ್ರಾಮದ ಮುನಿರಾಜು.
ವೆಂಕಟಗಿರಿಕೋಟೆ ಕೆರೆಯಿಂದ ಮಣ್ಣು ತರಿಸಿಕೊಂಡು ಮಡಿಕೆಗಳನ್ನು ತಯಾರಿಸುತ್ತಿದ್ದೆವು. ಕೆರೆ ಭರ್ತಿಯಾಗಿರುವ ಕಾರಣ ಮಣ್ಣು ಸಿಗುತ್ತಿಲ್ಲ. ಮೊದಲು ₹4 ಸಾವಿರ ರೂಪಾಯಿಗೆ ಖರೀದಿ ಮಾಡಿಕೊಳ್ಳುತ್ತಿದ್ದೇವು ಈಗ ಬೇರೆ ಜಿಲ್ಲೆಗಳಿಂದ ತರುವ ಮಣ್ಣು, ಒಂದು ಲೋಡಿಗೆ ₹15 ಸಾವಿರ ಕೊಡಬೇಕಾಗಿದೆ. ಮಡಿಕೆಗಳನ್ನು ಸುಡಲು ಸೌದೆ ಖರೀದಿಸಬೇಕು. ಇದರಿಂದ ನಮಗೆ ನಷ್ಟವೇ ಜಾಸ್ತಿಯಾಗುತ್ತಿದ’ ಎಂದರು.
ನಾವು 25 ವರ್ಷಗಳಿಂದ ಇದೇ ಕಸುಬಿನಲ್ಲಿ ತೊಡಗಿದ್ದೇವೆ. ಬೇರೆ ಕಸುಬು ಗೊತ್ತಿಲ್ಲ. ಯಾವ ಯೋಜನೆಯಡಿ ಸಹಾಯಧನ ಸಿಗುತ್ತೆ ಎಂಬ ಮಾಹಿತಿ ಇಲ್ಲ. ಗುಡಿ ಕೈಗಾರಿಕೆಯಲ್ಲಿ ಸೌಲಭ್ಯ ಪಡೆಯಬಹುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಅಧಿಕಾರಿಗಳು ನಮಗೆ ನೆರವು ನೀಡಬೇಕು ಎನ್ನುತ್ತಾರೆ ಕೊಂಡಪ್ಪ.
ಮಣ್ಣಿನಿಂದ ಮಡಿಕೆ ಮಾತ್ರವಲ್ಲದೆ, ನೀರಿನ ಬಾಟಲಿ, ಗಣಪತಿ ವಿಗ್ರಹಗಳು, ದೀಪಾವಳಿ ಸಂದರ್ಭದಲ್ಲಿ ದೀಪಗಳು, ಅಲಂಕಾರಿಕ ವಸ್ತುಗಳು, ನೀರಿನ ಕೊಡಗಳು, ಹೂವಿನ ಕುಂಡಗಳು, ಹಣ ಉಳಿತಾಯ ಮಾಡುವ ಹುಂಡಿಗಳು, ಸಂಗೀತ ಕಚೇರಿಗಳಲ್ಲಿ ಉಪಯೋ ಗಿಸುವ ಘಟಂಗಳು ಸೇರಿದಂತೆ ಕಾಲಕ್ಕೆ ತಕ್ಕಂತೆ ವಸ್ತುಗಳನ್ನು ತಯಾರಿಸುತ್ತೇವೆ. ಅವುಗಳನ್ನು ಚಿಕ್ಕಬಳ್ಳಾಪುರ, ಕೋಲಾರ, ವಿಜಯಪುರ, ದೇವನಹಳ್ಳಿ ಮುಂತಾದ ಕಡೆಗಳಲ್ಲಿ ನಡೆಯುವ ಸಂತೆಗಳು ಮತ್ತು ಜಾತ್ರೆಗಳಲ್ಲಿ ಮಾರಾಟ ಮಾಡುತ್ತೇವೆ ಎಂದರು.
