
ಸೊರಬ: ತಾತ್ಕಾಲಿಕ ಪತ್ರಿಕಾ ಕಚೇರಿಗೆ ಪುರಸಭೆ ಆಡಳಿತವು ಲಕ್ಷಾಂತರ ರೂಪಾಯಿ ಖರ್ಚು ಮಾಡಿದ್ದು, ಈ ಬಗ್ಗೆ ಸೋಮವಾರ ಪುರಸಭೆ ಸಾಮಾನ್ಯ ಸಭೆಯಲ್ಲಿ ಆಡಳಿತ ಪಕ್ಷದ ಸದಸ್ಯರು ವಿರೋಧ ವ್ಯಕ್ತಪಡಿಸಿ, ಪ್ರತಿಭಟಿಸಿದರು.
ಅಧ್ಯಕ್ಷ ಈರೇಶ್ ಮೇಸ್ತ್ರಿ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ ಆರಂಭವಾಗುತ್ತಿದ್ದಂತೆ, ‘ಪುರಸಭೆಯ ಸಾಮಾನ್ಯ ಹಣಕಾಸು ಯೋಜನೆಯಡಿ ಕೈಗೆತ್ತಿಕೊಂಡಿರುವ ಕಾಮಗಾರಿಗಳಿಗೆ ಎಷ್ಟು ಅನುದಾನ ಬಳಕೆ ಆಗಿದೆ’ ಎಂದು ಆಡಳಿತ ಪಕ್ಷದ ಉಪಾಧ್ಯಕ್ಷ ಮಧುರಾಯ್ ಶೇಟ್, ಸದಸ್ಯರಾದ ಎಂ.ಡಿ.ಉಮೇಶ್, ನಟರಾಜ, ಪ್ರಭು ಮೇಸ್ತ್ರಿ ಅವರು ಪ್ರಶ್ನಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಾಧಿಕಾರಿ ಗಿರೀಶ್, ‘ಈಗಾಗಲೇ ಪಟ್ಟಣದಲ್ಲಿ ಹಲವು ಕಾಮಗಾರಿಗಳನ್ನು ನಡೆಸಲಾಗಿದೆ. ಕಾನಕೇರಿಯಲ್ಲಿ ಪತ್ರಕರ್ತರ ಕೆಲಸ ಕಾರ್ಯಗಳಿಗೆ ಕಚೇರಿ ನೀಡಲು ಹಳೆ ಗ್ರಂಥಾಲಯವನ್ನು ನವೀಕರಣಗೊಳಿಸಲಾಗಿದೆ. ಅದಕ್ಕಾಗಿ ₹ 2.10 ಲಕ್ಷ ವೆಚ್ಚ ಮಾಡಲಾಗಿದೆ’ ಎಂದು ಸಭೆಯ ಗಮನಕ್ಕೆ ತಂದರು.
ಆಗ ಸದಸ್ಯರು, ‘ಯಾರ ಅನುಮತಿ ಕೇಳಿ ಅನುದಾನ ನೀಡಿದ್ದೀರಿ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಧ್ಯಕ್ಷ ಈರೇಶ್ ಮೇಸ್ತ್ರಿ ಮಧ್ಯೆ ಪ್ರವೇಶಿಸಿ, ‘ಶಾಸಕ ಕುಮಾರ್ ಬಂಗಾರಪ್ಪ ಅವರ ಸಲಹೆ ಮೇರೆಗೆ ತಾಲ್ಲೂಕು ಕಚೇರಿಯಲ್ಲಿ ಪುರಸಭೆ ಸದಸ್ಯರನ್ನು ಒಳಗೊಂಡಂತೆ ತುರ್ತುಸಭೆ ನಡೆಸಿ ಘಟನೋತ್ತರ ನಿರ್ಣಯ ಕೈಗೊಂಡು ಗ್ರಂಥಾಲಯ ನವೀಕರಣಗೊಳಿಸಿ ಪತ್ರಕರ್ತರಿಗೆ ಹಸ್ತಾಂತರಿಸುವಂತೆ ಸೂಚಿಸಿದ ಕಾರಣ ಕಾಮಗಾರಿ ಪೂರ್ಣಗೊಳಿಸಿ ಪತ್ರಕರ್ತರಿಗೆ ಹಸ್ತಾಂತರಿಸಲಾಗಿದೆ. ಈ ಬಗ್ಗೆ ಇವತ್ತಿನ ಸಭೆಯಲ್ಲಿ ಅನುಮತಿ ಪಡೆಯಲಾಗುವುದು’ ಎಂದು ತಿಳಿಸುತ್ತಿದ್ದಂತೆ, ಉಪಾಧ್ಯಕ್ಷ ಮಧುರಾಯ್ ಶೇಟ್ ಪ್ರತಿರೋಧ ವ್ಯಕ್ತಪಡಿಸಿದರು.
‘ಯಾರೋ ಹೇಳಿದ್ದಾರೆಂದು ಅಧ್ಯಕ್ಷರು ಹಾಗೂ ಮುಖ್ಯಾಧಿಕಾರಿ ಸದಸ್ಯರ ಗಮನಕ್ಕೆ ತರದೇ ಅಧಿಕಾರ ವನ್ನು ದುರುಪಯೋಗ ಮಾಡಿ ಕೊಂಡಿದ್ದಾರೆ’ ಎಂದು ಆರೋಪಿಸಿದರು.
‘ನಾನು ಪ್ರತಿನಿಧಿಸುವ ವಾರ್ಡ್ನಲ್ಲಿಯೇ ನವೀಕರಣಗೊಳಿಸಿದ ಪತ್ರಿಕಾ ಕಚೇರಿ ಇದ್ದು, ಅದರ ಉದ್ಘಾಟನೆಗೂ ಕರೆಯಲಿಲ್ಲ. ಆಹ್ವಾನ ಪತ್ರಿಕೆಯಲ್ಲಿಯೂ ಹೆಸರು ಹಾಕಿಲ್ಲ. ಅಷ್ಟಕ್ಕೂ ತುರ್ತು ಸಭೆ ನಡೆಸಿ ಘಟನನೋತ್ತರ ನಿರ್ಣಯ ಕೈಗೊಂಡು ಪತ್ರಿಕಾ ಕಚೇರಿ ನವೀಕರಣಗೊಳಿಸುವ ತುರ್ತಾದರೂ ಏನಿತ್ತು’ ಎಂದು ಪ್ರಶ್ನಿಸಿದರು.
ಆಗ ಕೆಲವು ಸದಸ್ಯರು ಧ್ವನಿಗೂಡಿಸಿ, ಪುರಸಭೆಯ ಸಭಾಂಗಣದ ಬಾವಿಗಿಳಿದು 3 ಗಂಟೆಗೂ ಅಧಿಕ ಹೊತ್ತು ಚರ್ಚಿಸಿದರು. ಇದರಿಂದ ಇತರೆ ಅಭಿವೃದ್ಧಿ ಕಾರ್ಯಗಳ ಕುರಿತು ಚರ್ಚಿಸಲು ಸಾಧ್ಯವಾಗಲಿಲ್ಲ.
ಅಲ್ಲದೇ ಸಭೆಗೆ ಬಂದ ಪತ್ರಕರ್ತರಿಗೂ ಮುಜುಗರ ಉಂಟಾಗಿ, ‘ಸಭೆಯೂ ಬೇಡ, ಅವರು ನೀಡಿದ ಕಚೇರಿಯೂ ಬೇಡ’ ಎಂದು ಬೇಸರಿಸಿಕೊಂಡು ಹೊರ ನಡೆದರು. ಈ ನಡುವೆಯೂ ಏಳು ಸದಸ್ಯರು ಪತ್ರಿಕಾ ಕಚೇರಿ ನವೀಕರಣ ವೆಚ್ಚದ ಅನುಮೋದನೆಗೆ ಒಪ್ಪಿಗೆ ಸೂಚಿಸಿದರು.
ಸಭೆಯಲ್ಲಿ ಮುಖ್ಯಾಧಿಕಾರಿ ಟಿ.ಎಸ್.ಗಿರೀಶ್, ಓಂಕಾರಪ್ಪ ಸೇರಿ ಪುರಸಭೆ ಸದಸ್ಯರು ಹಾಗೂ ಸಿಬ್ಬಂದಿ ಇದ್ದರು.