
ಮಾಗಡಿ: ಪಟ್ಟಣದ ಅಂಬೇಡ್ಕರ್ ಭವನದಲ್ಲಿ ತಾಲ್ಲೂಕು ಕಾನೂನು ಸೇವೆಗಳ ಸಮಿತಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ಗುರುವಾರ ಕಾನೂನು ಅರಿವು ನೆರವು ಹಾಗೂ ಪೋಷಣ್ ಅಭಿಯಾನ ಮಾಸಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಈ ವೇಳೆ 1ನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಹನುಮಂತ್ ರಾವ್ ಅನಂತ್ ರಾವ್ ಸಾತ್ವಿಕ್ ಮಾತನಾಡಿ, ಪ್ರಜೆಗಳು ಸರಳ ಕಾನೂನುಗಳ ಬಗ್ಗೆ ತಿಳುವಳಿಕೆ ಹೊಂದಿರಬೇಕು ಎಂದು ಹೇಳಿದರು.
ನಮ್ಮ ನ್ಯಾಯಾಲಯದಲ್ಲಿ ಭೂಮಿ ವ್ಯಾಜ್ಯಗಳೇ ಅಧಿಕವಾಗಿವೆ. ಪಹಣಿಯಲ್ಲಿ ಹೆಸರಿದ್ದರೆ ಸಾಲದು. ಭೂಮಿ ಖರೀದಿಸುವಾಗ ದಾಖಲೆಗಳನ್ನು ಪರಿಶೀಲಿಸಬೇಕು. ಪಿತ್ರಾರ್ಜಿತ ಆಸ್ತಿಯಲ್ಲಿ ಸಹೋದರರಿಗೆ ಹಕ್ಕು ಇರುತ್ತದೆ.
ರೈತರಿಗೆ ಕಾನೂನು ಅರಿವು ನೆರವು ಸಮಿತಿಯ ವಕೀಲರಿದ್ದು, ಅವರನ್ನು ಭೇಟಿ ಮಾಡಿ ಭೂ ವ್ಯಾಜ್ಯಗಳ ಬಗ್ಗೆ ಸಲಹೆ ಪಡೆದು ಪರಿಹರಿಸಿಕೊಳ್ಳಬೇಕು. ಪೌಷ್ಟಿಕಾಂಶ ಆಹಾರ ಪಡೆಯುವುದು ಮಗುವಿನ ಮೂಲಭೂತ ಹಕ್ಕು ಎಂಬುದನ್ನು ಸಂವಿಧಾನದಲ್ಲೇ ಇದೆ.
ಪ್ರತಿಯೊಂದು ಮಗುವಿಗೂ ಪೌಷ್ಟಿಕಾಂಶದ ಕೊರತೆಯಾಗದಂತೆ ಜಾಗೃತಿ ಮೂಡಿಸಬೇಕು. ಗರ್ಭಿಣಿ, ಬಾಣಂತಿಯರು, ಮಕ್ಕಳಿಗೆ ಸರ್ಕಾರದ ಸವಲತ್ತುಗಳನ್ನು ತಲುಪಿಸಿ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ನಾವೆಲ್ಲರೂ ದುಡಿಯಬೇಕಿದೆ ಎಂದು ತಿಳಿಸಿದರು.
ತಾಲ್ಲೂಕು ವೈದ್ಯಾಧಿಕಾರಿ ಡಾ.ಚಂದ್ರಶೇಖರ್ ಮಾತನಾಡಿ, ‘ಪೋಷಣ್ ಅಭಿಯಾನದಲ್ಲಿ ಮಾತ್ರ ಪೌಷ್ಟಿಕ ಆಹಾರ ಪ್ರದರ್ಶನಕ್ಕೆ ಸೀಮಿತರಾಗದೆ, ಪ್ರತಿಯೊಂದು ಮಗುವಿಗೂ ಪೌಷ್ಟಿಕ ಆಹಾರ ದೊರೆಯುವಂತೆ ನೋಡಿಕೊಳ್ಳಬೇಕು. ಸದೃಢ ಶಕ್ತಿವಂತ ದೇಹದಲ್ಲಿ ನೋವು ಕಡಿಮೆ ಇರುತ್ತದೆ’ ಎಂದರು.
ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಆರ್.ರಂಗನಾಥ್ ಮಾತನಾಡಿ, ಚರಂಡಿ ನೀರಿನಲ್ಲಿ ಬೆಳೆದ ತರಕಾರಿ, ಸೊಪ್ಪುಗಳನ್ನು 4 ಬಾರಿ ಒಳ್ಳೆಯ ನೀರಿನಿಂದ ತೊಳೆದು ಬಳಸಬೇಕು ಎಂದರು.
ಶೇ 52ರಷ್ಟು ಮಹಿಳೆಯರು ರಕ್ತಹೀನತೆಯಿಂದ ಬಳಲುತ್ತಿದ್ದಾರೆ. ಶೇ 42ರಷ್ಟು ಮಕ್ಕಳಲ್ಲಿ ರಕ್ತಹೀನತೆ ಕಾಡುತ್ತಿದೆ. ಸಿದ್ಧಪಡಿಸಿದ ಜಂಕ್ ಪುಡ್ ಬಳಕೆ ವಿಷ ಕುಡಿದಂತೆ ಎಂಬುದನ್ನು ಪ್ರತಿಯೊಬ್ಬರೂ ಅರಿತುಕೊಳ್ಳಬೇಕು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ನಾರಾಯಣಸ್ವಾಮಿ, ಮಾತೃವಂದನಾ ಯೋಜನೆಯ ಬಗ್ಗೆ ಸತೀಶ್.ಬಿ.ತೈಲೂರು, ಸಿಡಿಪಿಒ ಸುರೇಂದ್ರ.ಬಿ.ಎಲ್, ವಕೀಲರಾದ ಸಿದ್ದರಾಜು, ರಾಜಶೇಖರ್, ಅನಿಲ್ಕುಮಾರ್, ವಿಜಯ್ಕುಮಾರ್, ಮದನ್ ಕುಮಾರ್ ಮಾತನಾಡಿದರು.
ಗರ್ಭಿಣಿಯರಿಗೆ ಸೀಮಂತ ಮಾಡಿ ಮಡಿಲು ತುಂಬಿಸಲಾಯಿತು. ಅಂಗನವಾಡಿ ಕಾರ್ಯಕರ್ತೆಯರು ಇದ್ದರು. ವಿವಿಧ ಹಣ್ಣು, ತರಕಾರಿ, ದ್ವಿದಳ ಧಾನ್ಯಗಳು ಮತ್ತು ಪೌಷ್ಟಿಕ ಆಹಾರದ ಪ್ರದರ್ಶನ ಏರ್ಪಡಿಸಿದ್ದರು.
ಆರೋಗ್ಯವಂತ ಮಕ್ಕಳು ದೇಶದ ಆಸ್ತಿ
ಪೌಷ್ಟಿಕ ಆಹಾರ ಪಡೆಯುವುದು ಎಲ್ಲರ ಹಕ್ಕು. ಆಹಾರ ಮತ್ತು ಆರೋಗ್ಯ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಹಸಿವು ಮುಕ್ತ ಸಮಾಜ ನಿರ್ಮಾಣದ ಅಗತ್ಯವಿದೆ ಎಂದು ಚಂದೂರಾಯನಹಳ್ಳಿ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥೆ ಡಾ.ಲತಾ.ಆರ್.ಕುಲಕರ್ಣಿ ಹೇಳಿದರು.
ಒಂದು ವರ್ಷದಲ್ಲಿ 5 ಸಾವಿರ ಮಕ್ಕಳು ಅಪೌಷ್ಟಿಕತೆಯಿಂದ ಸಾಯುತ್ತಿವೆ. ಬಡತನ, ಮೂಢನಂಬಿಕೆ ಹಾಗೂ ಅಪೌಷ್ಟಿಕತೆಗಳಿಂದ ಮಕ್ಕಳನ್ನು ರಕ್ಷಿಸಬೇಕಿದೆ. ಮಕ್ಕಳಿಗೆ ಬಾಲ್ಯದಿಂದಲೇ ಧಾನ್ಯ, ಬೇಳೆಕಾಳು, ಮೊಟ್ಟೆ, ಮಾಂಸ, ಮೀನು, ಸೊಪ್ಪು, ಹಣ್ಣು , ತರಕಾರಿ, ಎಣ್ಣೆ-ಬೆಣ್ಣೆ ಕೊಡಬೇಕು. ಶುಚಿ ರುಚಿಯಾದ ಆಹಾರ, ಹಣ್ಣಿನ ರಸ, ಬೇಳೆಕಟ್ಟು ಕೊಡಬೇಕು. ಕ್ಯಾಲ್ಸಿಯಂ ಮಿಶ್ರಿತ ಸಿರಿಧಾನ್ಯ ಬಳಸಬೇಕು.
ನಿತ್ಯ 250 ಎಂಎಲ್ ಹಾಲು ಕುಡಿಸಬೇಕು. ಮಗುವಿನ ಎತ್ತರಕ್ಕೆ ಸರಿಯಾದ ತೂಕವಿರಬೇಕು. ತಾಯಂದಿರಿಗೆ ಮಗುವಿನ ಆರೋಗ್ಯದ ಬಗ್ಗೆ ಸೂಕ್ತ ತಿಳುವಳಿಕೆ ಕೊಡಬೇಕು. ಆರೋಗ್ಯವಂತ ಮಕ್ಕಳೇ ದೇಶದ ಆಸ್ತಿ ಎಂದರು.
Inf:PVN

Sibin P S