
ಸಾಗರ: ಈ ಕ್ಷೇತ್ರದ ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಕೆ. ದಿವಾಕರ್ ಅವರ ಸರ್ವಾಧಿಕಾರಿ ಧೋರಣೆಯನ್ನು ಖಂಡಿಸಿ ಆಪ್ ತೊರೆದು ಕಾಂಗ್ರೆಸ್ಗೆ ಸೇರ್ಪಡೆಯಾಗಿದ್ದೇನೆ ಎಂದು ಆಮ್ ಆದ್ಮಿ ಪಕ್ಷದ ತಾಲ್ಲೂಕು ಸಂಚಾಲಕ ಅಮೃತ್ ರಾಸ್ ತಿಳಿಸಿದ್ದಾರೆ.
ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ಆಡಳಿತ ವೈಖರಿಯನ್ನು ಮೆಚ್ಚಿ ಎರಡು ವರ್ಷಗಳ ಹಿಂದೆಯೆ ಆಪ್ ಪಕ್ಷಕ್ಕೆ ಸೇರಿ ಅದರ ಸಂಘಟನೆಯಲ್ಲಿ ತೊಡಗಿದ್ದೆ. ಕೆ.ದಿವಾಕರ್ ಅವರನ್ನು ಈ ಕ್ಷೇತ್ರದಿಂದ ಸ್ಪರ್ಧಿಸುವಂತೆ ಆಹ್ವಾನ ನೀಡಿದವರಲ್ಲಿ ನಾನೂ ಕೂಡ ಒಬ್ಬನಾಗಿದ್ದೆ. ಆದರೆ ಅವರ ತಪ್ಪು ನಡೆಗಳಿಂದ ಪಕ್ಷದ ಸಂಘಟನೆಗೆ ಧಕ್ಕೆಯಾಗುತ್ತಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
‘ಒಬ್ಬ ವ್ಯಕ್ತಿಗೆ ಒಂದೇ ಹುದ್ದೆ ಎಂಬ ನಿಯಮ ಆಮ್ ಆದ್ಮಿ ಪಕ್ಷದಲ್ಲಿದೆ. ಕೆ. ದಿವಾಕರ್ ಅವರು ಚುನಾವಣೆ ಅಭ್ಯರ್ಥಿಯಾದ ನಂತರ ಪದಾಧಿಕಾರಿ ಹುದ್ದೆಗೆ ರಾಜಿನಾಮೆ ನೀಡಬೇಕಿತ್ತು. ಆ ಕೆಲಸವನ್ನು ಅವರು ಮಾಡಿಲ್ಲ. ಪಕ್ಷದ ರಾಜ್ಯ ಘಟಕದ ಅಧ್ಯಕ್ಷರಿಗೆ ವೇತನ ನೀಡಿ ಪಕ್ಷವನ್ನು ಸಂಘಟಿಸಲಾಗುತ್ತಿದೆ. ಹೀಗಾದರೆ ಪಕ್ಷ ಬೆಳೆಯುವುದಾದರೂ ಹೇಗೆ’ ಎಂದು ಅವರು ಪ್ರಶ್ನಿಸಿದರು.
ಅರವಿಂದ ಕೇಜ್ರಿವಾಲ್ ಅವರು ಹಲವು ಉಚಿತ ಕೊಡುಗೆಗಳನ್ನು ಜನರಿಗೆ ನೀಡಿದ ಮಾದರಿಯಲ್ಲೆ ಕಾಂಗ್ರೆಸ್ ಪಕ್ಷ ತನ್ನ ಪ್ರಣಾಳಿಕೆಯಲ್ಲಿ ಕೊಡುಗೆಗಳನ್ನು ಘೋಷಿಸಿರುವುದರಿಂದ ಕಾಂಗ್ರೆಸ್ಗೆ ಸೇರುತ್ತಿದ್ದೇನೆ ಎಂದು ಅವರು ತಿಳಿಸಿದರು.
ಅಭಿವೃದ್ಧಿ ವಿಷಯ ಆಧರಿಸಿ ಚುನಾವಣೆ ನಡೆಸುತ್ತೇವೆ ಎಂದು ಬಿಜೆಪಿ ಮುಖಂಡರು ಹೇಳಿದ್ದರು. ಆದರೆ ಜೈ ಶ್ರೀರಾಮ್ ಘೋಷಣೆ ಕೂಗುತ್ತ ಬಿಜೆಪಿ ಕಾರ್ಯಕರ್ತರು ಪ್ರಚಾರ ಕಾರ್ಯದಲ್ಲಿ ಪಾಲ್ಗೊಳ್ಳುತ್ತಿದ್ದು ತಮ್ಮ ರಾಜಕೀಯ ಲಾಭಕ್ಕಾಗಿ ದೇವರ ಹೆಸರನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ತಾಲ್ಲೂಕು ಕಾಂಗ್ರೆಸ್ ವಕ್ತಾರ ಕೆ.ಎಲ್. ಭೋಜರಾಜ್ ಆರೋಪಿಸಿದರು.
ಪ್ರಮುಖರಾದ ಜೇಕಬ್, ಹುಚ್ಚಪ್ಪ ಕುಗ್ವೆ, ಫ್ರಾನ್ಸಿಸ್, ಗೋಪಾಲಕೃಷ್ಣ ಇದ್ದರು.
inf:PV
Advertisment:
