
ಬೆಂಗಳೂರು: ವಿಧಾನಸೌಧಕ್ಕೆ ಕೆಲಸ ನಿಮಿತ್ತ ಬಂದಿದ್ದ ಲೋಕೋಪಯೋಗಿ ಇಲಾಖೆ ಕಿರಿಯ ಎಂಜಿನಿಯರ್ ಜಗದೀಶ್ ಎಂಬುವರ ಬ್ಯಾಗ್ನಲ್ಲಿ ₹10 ಲಕ್ಷ ನಗದು ಪತ್ತೆಯಾಗಿದ್ದು, ಅದನ್ನು ಭದ್ರತಾ ಸಿಬ್ಬಂದಿ ಜಪ್ತಿ ಮಾಡಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ಬುಧವಾರ ವಿಧಾನಸೌಧಕ್ಕೆ ಬ್ಯಾಗ್ ಹಿಡಿದು ಬಂದಿದ್ದ ಜಗದೀಶ್ ಅವರನ್ನು ಭದ್ರತಾ ಸಿಬ್ಬಂದಿ ಪರಿಶೀಲನೆ ನಡೆಸಿದ್ದರು. ಹಣ ಇರುವುದು ಗೊತ್ತಾಗುತ್ತಿದ್ದಂತೆ ದಾಖಲೆ ಕೇಳಿದ್ದರು. ಆದರೆ, ಹಣದ ಬಗ್ಗರ ಯಾವುದೇ ದಾಖಲೆ ಇರಲಿಲ್ಲ. ಹೀಗಾಗಿ, ಹಣವನ್ನು ಜಪ್ತಿ ಮಾಡಿ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು.
ಜಪ್ತಿ ಮಾಡಿದ್ದ ಹಣವನ್ನು ವಿಧಾನಸೌಧ ಠಾಣೆ ಪೊಲೀಸರಿಗೆ ಒಪ್ಪಿಸಲಾಗಿದ್ದು, ಅಕ್ರಮ ಹಣ ಹೊಂದಿದ್ದ ಆರೋಪದಡಿ ಜಗದೀಶ್ ವಿರುದ್ಧ ಪ್ರಕರಣ ದಾಖಲಾಗಿದೆ.
ಮಂಡ್ಯಕ್ಕೆ ಹಣ ತೆಗೆದುಕೊಂಡು ಹೋಗುತ್ತಿದೆ. ಕೆಲಸ, ಇದ್ದಿದ್ದರಿಂದ ವಿಧಾನಸೌಧಕ್ಕೆ ಬಂದೆ ಎಂಬುದಾಗಿ ಜಗದೀಶ್ ಹೇಳಿಕೆ ನೀಡಿದ್ದಾರೆ. ಆದರೆ, ಹಣ ಎಲ್ಲಿಂದ ತಂದಿದ್ದಾರೆ? ಎಲ್ಲಿಗೆ ತೆಗೆದುಕೊಂಡು ಹೋಗುತ್ತಿದ್ದರು ಎಂಬುದಕ್ಕೆ ಯಾವುದೇ ಪುರಾವೆ ನೀಡಿಲ್ಲ. ಜಗದೀಶ್ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.