
ಬೆಂಗಳೂರು: ಸಾಮಾಜಿಕ ಮಾಧ್ಯಮ ‘ಟ್ವಿಟರ್’ನಲ್ಲಿ ‘ಬೆಂಗಳೂರು ಪೊಲೀಸ್’ ಹೆಸರಿನಲ್ಲಿ ನಕಲಿ ಖಾತೆ ಸೃಷ್ಟಿಸಲಾಗಿದ್ದು, ಈ ಬಗ್ಗೆ ಪೊಲೀಸರು ಜನರಿಗೆ ಎಚ್ಚರಿಕೆ ಸಂದೇಶದ ಪೋಸ್ಟ್ ಪ್ರಕಟಿಸಿದ್ದಾರೆ.
@BlrCityPolicee ಹ್ಯಾಶ್ ಟ್ಯಾಗ್ ಬಳಸಿ ನಕಲಿ ಖಾತೆ ತೆರೆದಿರುವ ಕಿಡಿಗೇಡಿಗಳು, ಕ್ರಿಕೆಟ್ ಆಟಗಾರ ವಿರಾಟ್ ಕೊಹ್ಲಿಗೆ ಸಂಬಂಧಪಟ್ಟಂತೆ ಪೋಸ್ಟ್ ಹಾಕಿದ್ದಾರೆ. ‘ವಿರಾಟ್ ಕೊಹ್ಲಿ ತಮ್ಮ ಬ್ಯಾಟಿಂಗ್ ವೇಳೆ 50 ರನ್ ಹತ್ತಿರವಿದ್ದಾಗ, ಝಿಬ್ರಾ ಕ್ರಾಸ್ನಲ್ಲಿ ನಿಲ್ಲುವಂತೆ ತಟಸ್ಥರಾಗುತ್ತಾರೆ’ ಎಂದು ಪೋಸ್ಟ್ನಲ್ಲಿ ಬರೆದಿದ್ದಾರೆ.
ಗುರುವಾರ ಮಧ್ಯಾಹ್ನ 2.20ಕ್ಕೆ ಈ ಪೋಸ್ಟ್ ಮಾಡಲಾಗಿದೆ. ಶುಕ್ರವಾರ ಸಂಜೆಯವರೆಗೆ 10 ಲಕ್ಷ ಮಂದಿ ಈ ಪೋಸ್ಟ್ ನೋಡಿದ್ದು, ‘ಪೊಲೀಸರೇ ನಿಮಗೆ ಏಕೆ ಬೇಕಿತ್ತು ಈ ಪೋಸ್ಟ್’ ಎಂದು ಹಲವರು ಅಭಿಪ್ರಾಯ ಹಂಚಿಕೊಂಡಿದ್ದಾರೆ.
ನಕಲಿ ಖಾತೆ ಪೋಸ್ಟ್ನಿಂದ ಇಕ್ಕಟ್ಟಿಗೆ ಸಿಲುಕಿರುವ ಅಸಲಿ ಪೊಲೀಸರು, ‘ಇದೊಂದು ನಕಲಿ ಖಾತೆ. ಇದನ್ನು ಯಾರೂ ನಂಬಬೇಡಿ. ಕೃತ್ಯ ಎಸಗಿರುವ ಕಿಡಿಗೇಡಿಗಳನ್ನು ಪತ್ತೆ ಮಾಡಿ ಕಠಿಣ ಕ್ರಮ ಜರುಗಿಸಲಾಗುವುದು’ ಎಂದು ‘ಬೆಂಗಳೂರು ಸಿಟಿ ಪೊಲೀಸ್’ ಖಾತೆಯಲ್ಲಿ ಶುಕ್ರವಾರ ಸಂಜೆ ಪೋಸ್ಟ್ ಪ್ರಕಟಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಜನ, ‘ಪೊಲೀಸರೇ ಸುರಕ್ಷಿತವಿಲ್ಲ. ಇನ್ನು ಸಾಮಾನ್ಯ ಜನರ ಗತಿಯೇನು’ ಎಂದಿದ್ದಾರೆ.
‘ಅತೀ ಬುದ್ದಿವಂತರು, ಸೂರ್ಯನಿಗೆ ಟಾರ್ಚ್ ಹಿಡಿದಿದ್ದಾರೆ’ ಎಂದೂ ಪ್ರತಿಕ್ರಿಯಿಸಿದ್ದಾರೆ.
‘ಐಪಿಎಲ್ ಎಂದರೆ, ಇಂಡಿಯಲ್ ಪೊಲೀಸ್ ಲೀಗ್ ಎಂದು ಕಿಡಿಗೇಡಿಗಳು ತಿಳಿದಿರುವಂತಿದೆ. ನಕಲಿ ಖಾತೆ ಸೃಷ್ಟಿಸಿರುವವರನ್ನು ಬಂಧಿಸಿ, ಅವರ ಫೋಟೊಗಳನ್ನು ಅಸಲಿ ಖಾತೆಯಲ್ಲಿ ಪ್ರಕಟಿಸಿ’ ಎಂದೂ ಕೆಲವರು ಒತ್ತಾಯಿಸಿದ್ದಾರೆ.
inf:BP-PVN
CRYSTAL BEAUTY SPA – FAMILY LOUNGE
B.H.Road,Sagar -M:7837839903
